ಸಿದ್ದಾಪುರ, ಡಿ. 11: ಓಡಿಪಿ ಸಂಸ್ಥೆ ಹಾಗೂ ಅಂದೇರಿ ಹಿಲ್ಪೆ ಜರ್ಮನಿ ಇವರ ಸಹಯೋಗದಲ್ಲಿ ಮಾಲ್ದಾರೆಯ ಸಮುದಾಯ ಭವನದಲ್ಲಿ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ರೈತ ಉತ್ಪನ್ನ ಕೂಟದ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಓಡಿಪಿ ಸಂಸ್ಥೆಯ ರೈತ ಉತ್ಪನ್ನ ಕೂಟದ ಸಂಯೋಜಕ ಜಾನ್ ಬಿ. ರಾಡ್ರಿಗಸ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮುಂದಿನ 3-4 ವರ್ಷಗಳಲ್ಲಿ 15-20 ಸಾವಿರ ರೈತರನ್ನು ಒಗ್ಗೂಡಿಸಿ ಅವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದು ಮಾಹಿತಿ ನೀಡಿದರು. ಹೆಚ್ಚಿನ ರೈತರು ಇದರ ಸದುಪಯೋಗವನ್ನು ಪಡಿಸಿಕೊಳ್ಳುವಂತೆ ಜಾನ್ ಕರೆ ನೀಡಿದರು.

ಓಡಿಪಿ ಸಂಸ್ಥೆಯ ಜಿಲ್ಲಾ ಸಂಯೋಜಕಿ ಜಾಯ್ಸ್ ಮಿನಜೆಸ್ ಕ್ಯಾನ್ಸರ್ ರೋಗದ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ಕ್ಯಾನ್ಸರ್ ಬಗ್ಗೆ ಓಡಿಪಿಯ ಕಾರಿಥಾಸ್ ಇಂಡಿಯಾ ಬೆಂಗಳೂರು ಸಂತ ಜೋಸೆಫರ ಆಸ್ಪತ್ರೆ ಮೈಸೂರು ಹಾಗೂ ಇನ್ನಿತರ ಆಸ್ಪತ್ರೆಗಳೊಂದಿಗೆ ಸೇರಿ ಕ್ಯಾನ್ಸರ್ ರೋಗವನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಓಡಿಪಿ ಸಂಸ್ಥೆಯ ವತಿಯಿಂದ ಆರೋಗ್ಯ ಶಿಬಿರಗಳನ್ನು ಏರ್ಪಡಿಸಲಾಗುವುದು. ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಓಡಿಪಿ ಸಂಸ್ಥೆಯ ಕಾರ್ಯಕರ್ತರಾದ ಧನುಕುಮಾರ್, ಅಕ್ಷಯ್, ವಿಜಯ ನಾರಾಯಣ, ಮಹಿಳಾ ಒಕ್ಕೂಟದ ಸದಸ್ಯರಾದ ಪಿ.ಎನ್. ಉಷಾ, ಕೆ.ಬಿ. ಸುಜಾ, ಪುಷ್ಪ ಇನ್ನಿತರರು ಹಾಜರಿದ್ದರು.