ಮಡಿಕೇರಿ, ಡಿ. 10: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ಕೊಡಗು ಮತ್ತು ಕೇರಳ ಗಡಿಭಾಗದಲ್ಲಿ ವಹಿಸಬೇಕಾದ ಕ್ರಮಗಳ ಬಗ್ಗೆ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ, ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ. ಸಜೀತ್ ಬಾಬು ಅವರೊಂದಿಗೆ ವೀಡಿಯೋ ಸಂವಾದ ನಡೆಯಿತು.

ಗ್ರಾ.ಪಂ. ಚುನಾವಣಾ ಮತದಾನ ದಿನದಂದು 5 ಕಿ.ಮೀ. ವ್ಯಾಪ್ತಿಯಲ್ಲಿ ಒಣದಿನ (ಡ್ರೈ ಡೇ) ಘೋಷಿಸುವಂತೆ ಕಾಸರಗೋಡು ಜಿಲ್ಲಾಧಿಕಾರಿ ಅವರಲ್ಲಿ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೋರಿದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ಚುನಾವಣಾ ಮತದಾನ ದಿನದಂದು ಗಡಿಭಾಗದಲ್ಲಿ ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಿದರು.

ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ. ಸಜೀತ್ ಬಾಬು ಅವರು ಚುನಾವಣಾ ಸಂದರ್ಭದಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು. ವೀಡಿಯೋ ಸಂವಾದ ಸಂದರ್ಭ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಕಾಂದೂ, ಅಬಕಾರಿ ಉಪ ಆಯುಕ್ತರಾದ ಬಿಂದುಶ್ರೀ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ್ ಶಿರಾಲಿ ಇದ್ದರು.