ಮಡಿಕೇರಿ, ಡಿ. 10: ಕೊಡಗು ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಶಿಕ್ಷಕರು ಹಾಗೂ ಶಿಕ್ಷಕೇತರ ಅವರಿಂದ ಸ್ಥಳೀಯ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರಕ್ಕೆ ಚಿಂತನೆ ನಡೆಸಲಾಗಿದ್ದು, ಈ ಬಗ್ಗೆ ಕೊಡಗು ಅನುದಾನ ರಹಿತ ಶಾಲೆಗಳ ಒಕ್ಕೂಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕುಶಾಲನಗರದ ಉದ್ಗಮ್ ಶಾಲೆಯಲ್ಲಿ ಖಾಸಗಿ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಸಭೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರಕ್ಕೆ ಚಿಂತನೆ ಮಾಡಲಾಯಿತು. ಖಾಸಗಿ ಶಾಲೆಗಳು ಹಾಗೂ ಖಾಸಗಿ ಶಿಕ್ಷಕ ವೃಂದ ಅವರನ್ನು ಸಂಕಷ್ಟದಲ್ಲಿ ಸರ್ಕಾರವು ನಿರ್ಲಕ್ಷಿಸಿದ ಬಗ್ಗೆ ಚರ್ಚಿಸಿ ಹಾಲಿ ಬರುವ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲು ಆಡಳಿತ ಮಂಡಳಿಯವರು ಹಾಗೂ ಶಿಕ್ಷಕರಿಂದ ಚಿಂತನೆ ನಡೆಸಲಾಯಿತು. ಇದರ ಬಗ್ಗೆ ರಾಜ್ಯ ಸಂಘಟನೆಯ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ನಿರ್ಧರಿಸಲಾಗಿದೆ.

ಸಭೆಯು ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದ ಝರು ಗಣಪತಿ ಅವರ ಮುಂದಾಳತ್ವದಲ್ಲಿ ನಡೆಯಿತು. ಸಭೆಯಲ್ಲಿ ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷ ದಾಮೋದರ್, ಪದಾಧಿಕಾರಿಗಳಾದ ಎಂ.ಎಸ್. ಪೂವಯ್ಯ, ಬಿ. ಪಿ.ಬೋಪಣ್ಣ, ಮಣಿ ಮೊಹಮದ್, ಸಚಿನ್ ವಾಸುದೇವ್, ವಿಜು.ಎನ್. ಡಿ, ಉಮಾ ಪ್ರಭಾಕರ್, ಮೋಹನ್ ಹಾಗೂ ಜಿಲ್ಲೆಯ ಎಲ್ಲಾ ಖಾಸಗಿ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು ಎಂದು ಒಕ್ಕೂಟದ ಪ್ರದಾನ ಕಾರ್ಯದರ್ಶಿಗಳಾದ ತಿಮ್ಮಯ್ಯ ಕೋಟ್ರಂಗಡ ಅವರು ಪತ್ರಿಕೆ ಹೇಳಿಕೆ ನೀಡಿದ್ದಾರೆ.