ರೈತ ವಿರೋಧಿ ಮಸೂದೆಗಳಿಗೆ ರಾಜ್ಯಪಾಲರು ಸಹಿ ಹಾಕದಿರಲು ಆಗ್ರಹ

ಬೆಂಗಳೂರು, ಡಿ. 10: ರೈತರ ಜನ ವಿರೋಧಿ ಕಾಯ್ದೆಗೆ ರಾಜ್ಯ ಪಾಲರು ಸಹಿ ಹಾಕಬಾರದೆಂದು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ರೈತರು ಪ್ರತಿಭಟನೆ ನಡೆಸಿದರು. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ರೈತರು ರೈಲ್ವೆ ನಿಲ್ದಾಣದಿಂದ ಮೆರವಣಿಗೆ ಮೂಲಕ ಸಾಗಿ ಫ್ರೀಡಂ ಪಾರ್ಕ್‍ನಲ್ಲಿ ಜಮಾವಣೆಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಅಂಗೀಕರಿಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಕರ್ನಾಟಕದಲ್ಲಿ ರೈತರ ಹೋರಾಟ ಮುಂದುವರಿಸಿದರು. ಭೂ ಸುಧಾರಣಾ ಮಸೂದೆಯನ್ನು ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಿದನ್ನು ವಿರೋಧಿಸಿ ರಾಜ್ಯ ಪಾಲರು ಮಸೂದೆಗೆ ಸಹಿ ಹಾಕಬಾರದು ಎಂದು ಆಗ್ರಹಿಸಿ ಐಕ್ಯ ಹೋರಾಟ ಸಮಿತಿಯು ಪ್ರತಿಭಟನೆ ನಡೆಸಿತು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ಕೊಡಗಿನಿಂದ ಜಿಲ್ಲಾ ಮುಖಂಡರಾದ ಚೆಟ್ರುಮಾಡ ಸುಜಯ್ ಬೋಪಯ್ಯ, ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಮಂಡೇಪಂಡ ಪ್ರವೀಣ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಗೋಹತ್ಯೆ ನಿಷೇಧ ಕುರಿತು ಸ್ಪಷ್ಟನೆ

ಬೆಂಗಳೂರು, ಡಿ. 10: ಗೋಹತ್ಯೆ ನಿಷೇಧ ವಿಧೇಯಕ ಪ್ರಸಕ್ತ ಅಧಿವೇಶನದಲ್ಲೇ ಅಂಗೀಕರಿಸಬೇಕಾಗಿತ್ತು. ವಿಧಾನ ಪರಿಷತ್ ಅನಿರ್ದಿಷ್ಟಾವಧಿಗೆ ಮುಂದೂಡುವ ಮೊದಲು ಅಲ್ಲಿ ಈ ಮಸೂದೆಯನ್ನು ಮಂಡಿಸಬೇಕಾಗಿದ್ದುದರಿಂದ ವಿಧಾನಸಭೆಯಲ್ಲಿ ಸ್ವಲ್ಪ ತರಾತುರಿಯಲ್ಲಿ ಈ ಮಸೂದೆಯನ್ನು ಮಂಡಿಸಲಾಯಿತು. ಅದನ್ನು ಬಿಟ್ಟು ಮತ್ತೆ ಯಾವುದೇ ದುರುದ್ದೇಶವಿರಲಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ. ವಿಧಾನಸಭೆಯ ಕೊನೆಯ ದಿನದ ಕಲಾಪದ ಆರಂಭದಲ್ಲಿ ಮಾತನಾಡಿದ ಅವರು, ಪರಿಷತ್ ಸಲಹಾ ಸಮಿತಿ ಸಭೆಗೆ ಹೋದಾಗ ವಿರೋಧ ಪಕ್ಷದ ನಾಯಕರು ಮಾಡಿದ ಹಠ ನೋಡಿದಾಗ ಯಾವುದೇ ಮಸೂದೆ ಅಂಗೀಕಾರವಾಗುವ ಸ್ಥಿತಿಯಲ್ಲಿರಲಿಲ್ಲ. ಆದ್ದರಿಂದ ಗೋಹತ್ಯೆ ನಿಷೇಧ ಮಸೂದೆಯನ್ನು ವಿಧಾನಸಭೆಯಲ್ಲಿ ಆದಷ್ಟು ಬೇಗ ಅಂಗೀಕಾರ ಮಾಡುವ ಅನಿವಾರ್ಯವಿತ್ತು. ವಿಪಕ್ಷ ನಾಯಕರಿಗೆ ಅವಮಾನ ಮಾಡುವ ದುರುದ್ದೇಶವಿರಲಿಲ್ಲ. ಪರಿಷತ್ ಅನಿರ್ದಿಷ್ಟಾವಧಿಗೆ ಮುಂದೂಡುವ ಆತಂಕವಿದ್ದುದರಿಂದ ವಿಧಾನಸಭೆಯಲ್ಲಿ ಬೇಗ ಮಂಡಿಸುವಂತೆ ಸ್ಪೀಕರ್‍ಗೆ ಮನವಿ ಮಾಡಿದ್ದೇವು ಎಂದು ಸ್ಪಷ್ಟಪಡಿಸಿದರು.

ನೂತನ ಸಂಸತ್ ಭವನಕ್ಕೆ ಶಿಲಾನ್ಯಾಸ

ನವದೆಹಲಿ, ಡಿ. 10: ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಗುರುವಾರ ನೂತನ ಸಂಸತ್ ಭವನಕ್ಕೆ ಶಿಲಾನ್ಯಾಸ ಪೂಜೆ ನೆರವೇರಿಸಿದರು. ಹಲವು ರಾಜಕೀಯ ಪಕ್ಷಗಳ ನಾಯಕರು, ಸಂಪುಟ ಸಚಿವರು, ವಿವಿಧ ದೇಶಗಳ ರಾಯಭಾರಿಗಳು, ಧಾರ್ಮಿಕ ಮುಖಂಡರು ತುಂಬಿದ್ದ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನೂತನ ಸಂಸತ್ತು ಭವನಕ್ಕೆ ಶಂಕುಸ್ಥಾಪನೆ ಮತ್ತು ಭೂಮಿ ಪೂಜೆಯನ್ನು ನೆರವೇರಿಸಿದರು. ದೆಹಲಿಯ ಸಂಸತ್ತು ಭವನ ಆವರಣದಲ್ಲಿಯೇ ನೂತನ ಸಂಸತ್ತು ಭವನ ತಲೆಯೆತ್ತಲಿದ್ದು, 2022ರ ವೇಳೆಗೆ ನಿರ್ಮಾಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕರ್ನಾಟಕದ ಶೃಂಗೇರಿ ಮಠದ ಅರ್ಚಕರ ನೇತೃತ್ವದಲ್ಲಿ ಭೂಮಿಪೂಜೆ ನೆರವೇರಿತು. ನಂತರ ಅಂತರ ಧರ್ಮ ಪ್ರಾರ್ಥನೆಯ ಧ್ಯೋತಕವಾಗಿ ಸರ್ವಧರ್ಮ ಪ್ರಾರ್ಥನೆ ನೆರವೇರಿತು. ಲೋಕಸಭಾಧ್ಯಕ್ಷ ಓಂ ಬಿರ್ಲಾ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ, ರಾಜ್ಯಸಭೆ ಉಪಾಧ್ಯಕ್ಷ ಪರಿವಂಶ್ ಕಾರ್ಯಕ್ರಮದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಹ ಉಪಸ್ಥಿತರಿದ್ದರು

ಆರ್ಥಿಕ ವರ್ಷದ ಕುಸಿತ ಶೇ. 8ಕ್ಕೆ ಇಳಿಕೆ

ನವದೆಹಲಿ, ಡಿ. 10: ಭಾರತದ ಆರ್ಥಿಕ ಚೇತರಿಕೆ ನಿರೀಕ್ಷೆಗಿಂತಲೂ ತ್ವರಿತಗತಿಯಲ್ಲಿ ಆಗಿದ್ದು, ಏಷ್ಯನ್ ಡೆವಲಪ್‍ಮೆಂಟ್ ಬ್ಯಾಂಕ್ (ಎಡಿಬಿ) 2020-21ರ ಆರ್ಥಿಕ ವರ್ಷದ ಕುಸಿತವನ್ನು ಶೇ.9 ರಿಂದ ಶೇ. 8ಕ್ಕೆ ಇಳಿಕೆ ಮಾಡಿದೆ. ಆರ್ಥಿಕತೆ ಸಹಜ ಸ್ಥಿತಿಗೆ ಮರಳುತ್ತಿರುವುದನ್ನು ಏಷ್ಯನ್ ಡೆವಲ್ಪ್ಮೆಂಟ್ ಔಟ್‍ಲುಕ್‍ನಲ್ಲಿ ಗಮನಿಸಲಾಗಿದ್ದು, ಎರಡನೇ ತ್ರೈಮಾಸಿಕದ ಕುಸಿತ ಶೇ. 7.5 ರಷ್ಟಿದ್ದು, ನಿರೀಕ್ಷೆಗೂ ವೇಗವಾಗಿ ಚೇತರಿಕೆ ಕಂಡಿದೆ ಎಂದು ಹೇಳಿದೆ. ಕೊರೊನಾ ಹಿನ್ನೆಲೆ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. 23.9 ರಷ್ಟು ಕುಸಿತ ದಾಖಲಾಗಿತ್ತು. 2020 ರ ಆರ್ಥಿಕ ವರ್ಷದ ಜಿಡಿಪಿ ಮುನ್ನೋಟವನ್ನು ಶೇ. 9.0 ಯಿಂದ ಶೇ. 8.0 ಕ್ಕೆ ಇಳಿಕೆ ಮಾಡಲಾಗಿದೆ. ಹೆಚ್2ನಲ್ಲಿ ಜಿಡಿಪಿ ಕಳೆದ ವರ್ಷದ ಗಾತ್ರಕ್ಕೇ ಮರಳುವ ಸಾಧ್ಯತೆ ಇದೆ. 2021 ರ ಆರ್ಥಿಕ ವರ್ಷದ ಬೆಳವಣಿಗೆಯನ್ನು ಶೇ.8.0 ರಷ್ಟಕ್ಕೆ ಅಂದಾಜಿಸಲಾಗಿದೆ ಎಂದು ಎಡಿಬಿ ತಿಳಿಸಿದೆ.

ನೀರು ಘಟಕದ ಹಗರಣ ತನಿಖೆಗೆ

ಬೆಂಗಳೂರು, ಡಿ. 10: ಆರ್‍ಒ ಕುಡಿಯುವ ನೀರು ಶುದ್ಧೀಕರಣ ಘಟಕದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಬಹುದೊಡ್ಡ ಹಗರಣದ ಬಗ್ಗೆ ತನಿಖೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶ ನೀಡಿದ್ದಾರೆ. ಆರ್‍ಒ ಕುಡಿಯುವ ನೀರು ಶುದ್ಧೀಕರಣ ಘಟಕದ ಹಗರಣ ವಿವಾದಕ್ಕೆ ಸಂಬಂಧಿಸಿದಂತೆ ನಿನ್ನೆ ವಿಧಾನಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಸದಸ್ಯರು, ವಿರೋಧ ಪಕ್ಷಗಳ ಸದಸ್ಯರು ತೀವ್ರ ಗದ್ದಲ ಎಬ್ಬಿಸಿದ ಹಿನ್ನೆಲೆ ಸಿಎಂ ಯಡಿಯೂರಪ್ಪ, ಜಂಟಿ ಆಯ್ಕೆ ಸಮಿತಿ ತನಿಖೆ ನಡೆಸಲಿದ್ದು ಮುಂದಿನ ಅಧಿವೇಶನದಲ್ಲಿ ಅದರ ವರದಿಯನ್ನು ಸದನದಲ್ಲಿ ಮಂಡಿಸಲಾಗುವುದು ಎಂದು ಪ್ರಕಟಿಸಿದರು. ಇದೊಂದು ಬಹುದೊಡ್ಡ ಹಗರಣ ಎಂದು ತಮ್ಮ ಗಮನಕ್ಕೆ ಬಂದಿದೆ ಎಂದು ಕೂಡ ಸಿಎಂ ಯಡಿಯೂರಪ್ಪ ಹೇಳಿದರು. ಅನೇಕ ಆರ್‍ಒ ಸ್ಥಾವರಗಳಲ್ಲಿ, ಉಪಕರಣಗಳು ಮತ್ತು ವಸ್ತುಗಳು ಬಳಕೆಯಾಗದೆ ಉಳಿದಿವೆ. ಈ ಘಟಕಗಳಲ್ಲಿ ನಾಲ್ಕು ಪಟ್ಟು ಹಣವನ್ನು ಖರ್ಚು ಮಾಡಲಾಗಿದೆ ಎಂದು ಸಹ ತಿಳಿದುಬಂದಿದೆ. ಜಂಟಿ ಆಯ್ಕೆ ಸಮಿತಿಯಿಂದ ವಿವರವಾದ ತನಿಖೆ ನಡೆಸಲಾಗುವುದು. ರಾಜ್ಯಾದ್ಯಂತ ಪಯಣಿಸಿ ಎರಡು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಬೇಕಿದೆ ಎಂದು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

ನೀಟ್ ಪರೀಕ್ಷೆ ರದ್ದುಪಡಿಸಲ್ಲ

ನವದೆಹಲಿ, ಡಿ. 10: ನೀಟ್ ಪರೀಕ್ಷೆಯನ್ನು ರದ್ದುಪಡಿಸುವ ಯಾವುದೇ ಉದ್ದೇಶವಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ಡಾ. ರಮೇಶ್ ಪೆÇಕ್ರಿಯಾಲ್ ಸ್ಪಷ್ಟಪಡಿಸಿದ್ದಾರೆ. ನೀಟ್ ಪರೀಕ್ಷೆ ರದ್ದು ಪಡಿಸಲಾಗುತ್ತದೆ ಎಂಬದು ಕೇವಲ ಸುಳ್ಳು ವದಂತಿ. ಯಾವುದೇ ಕಾರಣಕ್ಕೂ ನೀಟ್ ಪರೀಕ್ಷೆ ರದ್ದಾಗುವುದಿಲ್ಲ ಎಂದು ಸಚಿವರು ಹೇಳಿದರು. ದೆಹಲಿಯಲ್ಲಿ ತಜ್ಞರೊಂದಿಗೆ ವೆಬಿನಾರ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಕೊರೊನಾ ಸಂಕಷ್ಟದಿಂದ ಮುಂದೂಡಿದ್ದ ಸಿಬಿಎಸ್‍ಇಯ 10 ಮತ್ತು 12ನೇ ತರಗತಿ ಪರೀಕ್ಷೆಗಳು ಮುಂದಿನ ವರ್ಷ 2021ರಲ್ಲಿ ನಡೆಸಲಾಗುವುದು ಎಂದ ಸಚಿವರು, ವಿದ್ಯಾರ್ಥಿ ಗಳು ಯಾವುದೇ ಗಲಿಬಿಲಿ, ಅತಂತಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದರು. ಪರೀಕ್ಷಾ ದಿನಾಂಕ ಘೋಷಣೆಗೂ ಮೊದಲು ಪರೀಕ್ಷಾ ಸಿದ್ಧತೆಗಾಗಿ ವಿದ್ಯಾರ್ಥಿ ಗಳಿಗೆ ಸಾಕಷ್ಟು ಕಾಲಾವಕಾಶ ನೀಡಲಾಗುವುದು ಎಂದರು.

ಭತ್ತಕ್ಕೆ ಕನಿಷ್ಟ ಬೆಂಬಲ ಬೆಲೆ ದುಪ್ಪಟ್ಟು

ನವದೆಹಲಿ, ಡಿ. 10: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭತ್ತ-ಗೋಧಿ ಬೆಳೆದಿರುವ ರೈತರಿಗೆ ಈ ಹಿಂದಿದ್ದ ಯುಪಿಎ ಸರ್ಕಾರಕ್ಕಿಂತಲೂ ದುಪ್ಪಟ್ಟು ಕನಿಷ್ಟ ಬೆಂಬಲ ಬೆಲೆ ನೀಡಿದೆ. ಯುಪಿಎ ಸರ್ಕಾರ 2009-2014 ರ ಅವಧಿಯಲ್ಲಿ ಭತ್ತ-ಗೋಧಿ ಬೆಳೆದ ರೈತರಿಗೆ 3.74 ಲಕ್ಷ ರೂಪಾಯಿ ಕನಿಷ್ಟ ಬೆಂಬಲ ಬೆಲೆ ನೀಡಿದ್ದರೆ, ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ 2014-19 ರ ಅವಧಿಯಲ್ಲಿ 8 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ಕನಿಷ್ಟ ಬೆಂಬಲ ಬೆಲೆ ನೀಡಿದೆ. ಇದಿಷ್ಟೇ ಅಲ್ಲದೇ ಮೋದಿ ಸರ್ಕಾರ ಯುಪಿಎ ಸರ್ಕಾರಕ್ಕಿಂತಲೂ 74 ಪಟ್ಟು ಹೆಚ್ಚು ಕಾಳು(ದ್ವಿದಳ ಧಾನ್ಯ)ಗಳನ್ನು ರೈತರಿಂದ ಖರೀದಿಸಿದೆ ಎನ್ನುತ್ತಿದೆ ಅಂಕಿ-ಅಂಶಗಳು ಯುಪಿಎ ಸರ್ಕಾರ 1.52 ಲಕ್ಷ ಟನ್‍ನಷ್ಟು ಕಾಳುಗಳನ್ನು ಖರೀದಿಸಿದ್ದರೆ 2014-19 ವರೆಗೂ ಮೋದಿ ಸರ್ಕಾರ 112.28 ಲಕ್ಷ ಟನ್‍ನಷ್ಟು ಧಾನ್ಯಗಳನ್ನು ರೈತರಿಂದ ಖರೀದಿಸಿದೆ. ರೈತರ ವಿಷಯಗಳಿಗೆ ಸಂಬಂಧಿಸಿದಂತೆ ಇರುವ ಅಧಿಕೃತ ಅಂಕಿ-ಅಂಶ, ಮಾಹಿತಿಯ ಪ್ರಕಾರ, ಮುಖ್ಯಮಂತ್ರಿಯಾಗಿದ್ದಾಗ ಮೋದಿ ಸಾಧನೆಗಳ ಪೈಕಿ, ರೈತರ ಜೀವನವನ್ನು ಬದಲಾವಣೆ ಮಾಡುವುದು ಹಾಗೂ ಸ್ವಾವಲಂಬಿಗಳನ್ನಾಗಿಸಿರುವುದಾಗಿದೆ ಎಂದು ಐಎಎನ್‍ಎಸ್ ಪ್ರಕಟಿಸಿದೆ.