ನಾಪೆÇೀಕ್ಲು, ಡಿ. 10: ಭತ್ತದ ಕೃಷಿಯಿಂದ ಕಂಗೆಟ್ಟಿರುವ ರೈತರು ಹಲವಾರು ಅಡಿಕೆ, ಬಾಳೆ ಮುಂತಾದ ಪರ್ಯಾಯ ಬೆಳೆಗಳತ್ತ ಮನಸ್ಸು ಮಾಡಿದ್ದಾರೆ. ಇನ್ನು ಕೆಲವರು ತಮಗೆ ಅಗತ್ಯವಿರುವಷ್ಟು ಭತ್ತವನ್ನು ಬೆಳೆಯುತ್ತಿದ್ದಾರೆ. ಭತ್ತದ ಬಿತ್ತನೆ, ಸಸಿ ಮಡಿ ತಯಾರಿ, ನಾಟಿ ಕೆಲಸ, ಕಳೆ ನಿರ್ಮೂಲನೆ ಮತ್ತಿತರ ಕೆಲಸಗಳನ್ನು ಪೂರೈಸಿರುವ ರೈತರಿಗೆ ಇದೀಗ ಬೆಳೆ ಕಟಾವಿಗೆ ಬರುವ ಅವಧಿಯಲ್ಲಿ ಬೆಳೆಯನ್ನು ಸಂರಕ್ಷಿಸುವುದು ಸವಾಲಿನ ಕೆಲಸ.

ಕಾಡು ಪ್ರಾಣಿಗಳ ಹಾವಳಿ ಮಿತಿಮೀರಿದ್ದು, ಬೆಳೆ ಕಟಾವು ಮಾಡಿ ಕೈಸೇರುವ ತನಕ ರೈತರಿಗೆ ನೆಮ್ಮದಿ ಮರೀಚಿಕೆಯೇ. ಬೆಳೆ ಹಣ್ಣಾಗುವ ಸಮಯದಲ್ಲಿ ಮೋಡ ಕವಿದ ವಾತಾವರಣ ರೈತರನ್ನು ಚಿಂತೆಗೀಡು ಮಾಡಿದೆ. ಅದಕ್ಕೂ ಮಿಗಿಲಾಗಿ ರಾತ್ರಿ ಗದ್ದೆಗಳಿಗೆ ದಾಳಿ ಇಡುವ ಕಾಡು ಹಂದಿಗಳು ಬೆಳೆಯನ್ನು ನಾಶಪಡಿಸುತ್ತಿರುವುದು ರೈತರ ಚಿಂತೆಗೆ ಕಾರಣವಾಗಿದೆ. ಎರಡು-ಮೂರು ವರ್ಷಗಳಿಂದ ಸತತವಾಗಿ ಕಾಡು ಹಂದಿಗಳು ಭತ್ತದ ಗದ್ದೆಗಳಿಗೆ ದಾಳಿ ಮಾಡುತ್ತಿದ್ದು, ಬೇಸತ್ತ ರೈತರು ಭತ್ತದ ಕೃಷಿಯನ್ನೇ ಕೈಬಿಟ್ಟಿದ್ದಾರೆ. ಇದೀಗ ಭತ್ತದ ಕೃಷಿ ಕೈಗೊಂಡಿರುವ ರೈತರು ತಮ್ಮ ಗದ್ದೆಗಳ ಸುತ್ತ ಬೇಲಿ ನಿರ್ಮಿಸಿ ಸೀರೆ, ಪಂಚೆ ಇತ್ಯಾದಿಗಳನ್ನು ತಗಲು ಹಾಕಿ ಬೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬೇತು ಗ್ರಾಮದ ಮಕ್ಕಿ ದಿವಾಕರ ತಮ್ಮ ಗದ್ದೆಯ ಸುತ್ತಲೂ ಕೆಂಪು ಬಣ್ಣದ ಬಟ್ಟೆಗಳ ವೇಷ ತೊಡಿಸಿದ್ದಾರೆ. ಕಳೆದ ವರ್ಷ ಕಾಡು ಹಂದಿಗಳ ಉಪಟಳದಿಂದ ಭತ್ತದ ಇಳುವರಿ ಸಾಕಷ್ಟು ನಷ್ಟವಾಗಿತ್ತು. ಈ ಬಾರಿ ಸಾವಿರಾರು ರೂಪಾಯಿ ಖರ್ಚು ಮಾಡಿ ಹಂದಿಗಳು ಗದ್ದೆಯೊಳಗೆ ನುಸುಳದಂತೆ ನೆಟ್ ಅಳವಡಿಸಿದ್ದೇನೆ. ಇಳುವರಿ ಕೈಸೇರುವ ತನಕ ಆತಂಕ ತಪ್ಪಿದ್ದಲ್ಲ ಎನ್ನುತ್ತಾರೆ ದಿವಾಕರ. - ದುಗ್ಗಳ ಸದಾನಂದ