ಕುಶಾಲನಗರ, ಡಿ. 8: ಕುಶಾಲನಗರ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘ 2019-20ರ ಸಾಲಿನಲ್ಲಿ ಒಟ್ಟು ರೂ. 184 ಕೋಟಿ ವಾರ್ಷಿಕ ವ್ಯವಹಾರ ನಡೆಸಿದ್ದು ರೂ. 70.81 ಲಕ್ಷದಷ್ಟು ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ತಿಳಿಸಿದ್ದಾರೆ. ಅವರು ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ನಿರಂತರ 16 ವರ್ಷಗಳಿಂದ ಲಾಭದಲ್ಲಿ ಮುನ್ನಡೆಯುತ್ತಿರುವ ಸಂಘ ಸದಸ್ಯರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದೆ. ವಾರ್ಷಿಕ ಶೇ. 7 ರಿಂದ 20 ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ. 2004 ರಲ್ಲಿ ಪ್ರಾರಂಭಗೊಂಡ ಸಂಘ ಇದೀಗ 1203 ಸದಸ್ಯರನ್ನು ಹೊಂದಿದ್ದು ಅವರಿಂದ ರೂ. 3.14 ಕೋಟಿ ಪಾಲು ಹಣ ಸಂಗ್ರಹಿಸಿದೆ. ಜೊತೆಗೆ ವಿವಿಧ ಠೇವಣಿಗಳಾಗಿ ರೂ. 34.97 ಕೋಟಿ ಸ್ವೀಕರಿಸಲಾಗಿದೆ. ಸಂಘವು ನಿರಖು ಠೇವಣಿಗಳಿಗೆ ಶೇ. 8.5 ರಷ್ಟು ಬಡ್ಡಿ ನೀಡುತ್ತಿದ್ದು ಸಂಘದ ಮೂಲಕ ಜಾಮೀನು ಸಾಲ, ಪಿಗ್ಮಿ ಸಾಲ, ವ್ಯಾಪಾರ ಸಾಲ, ವಾಹನ, ಮಹಿಳಾ ಗುಂಪು ಸಾಲ, ಆಭರಣ ಸಾಲ ನೀಡಲಾಗುತ್ತಿದೆ. ಈ ಮೂಲಕ ಸಂಘದಿಂದ ರೂ. 39.31 ಕೋಟಿಗಳಷ್ಟು ಸಾಲ ವಿತರಿಸಲಾಗಿದೆ. 49 ಮಹಿಳಾ ಚೇತನ ಜಂಟಿ ಬಾಧ್ಯತಾ ಗುಂಪುಗಳಿದ್ದು ರೂ. 5.46 ಕೋಟಿ ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು. ಸದಸ್ಯರು ಕೋವಿಡ್ ಸಂಕಷ್ಟದಲ್ಲಿದ್ದಾಗ ತುರ್ತು ಆರ್ಥಿಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಗರಿಷ್ಠ 1 ಲಕ್ಷ ನೀಡುವ ಮೂಲಕ 227 ಸದಸ್ಯರಿಗೆ 2.19 ಕೋಟಿ ರೂಗಳಷ್ಟು ನೆರವು ನೀಡಲಾಗಿದೆ. ಮೈಕ್ರೋ ಫೈನಾನ್ಸ್ ಮತ್ತು ಇನ್ನಿತರ ಖಾಸಗಿ ಸಂಸ್ಥೆಗಳಿಂದ ಹೆಚ್ಚಿನ ಬಡ್ಡಿಗೆ ಸಾಲ ಪಡೆಯುವ ಮೂಲಕ ಶೋಷಣೆಗೊಳಗಾದ ದುರ್ಬಲ ವರ್ಗದ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಮಹಿಳಾ ಚೇತನ ಎಂಬ ಜಂಟಿ ಬಾಧ್ಯತಾ ಸಾಲ ಯೋಜನೆ ಪ್ರಾರಂಭಿಸಲಾಗಿದೆ. ಬ್ಯಾಂಕ್ ಆವರಣದಲ್ಲಿ ಎಟಿಎಂ ಹೊಂದಿರುವ ಅತ್ಯಾಧುನಿಕ ಸುಸಜ್ಜಿತ 4 ಅಂತಸ್ತುಗಳ ಕಟ್ಟಡ ನಿರ್ಮಾಣ ಮಾಡಲಾಗಿದ್ದು ಕಚೇರಿ ವ್ಯವಸ್ಥೆ ಹಾಗೂ ಸದಸ್ಯರಿಗೆ ಎಲ್ಲಾ ಮೂಲ ಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮಡಿಕೇರಿ ರಸ್ತೆಯಲ್ಲಿ 20 ಸೆಂಟ್‍ಗಳಷ್ಟು ಜಾಗ ಖರೀದಿ ಮಾಡಲಾಗಿದ್ದು ಅದರಲ್ಲಿ ಸಂಘದ ಮಹಾಸಭೆ ನಡೆಸಲು ಹಾಗೂ ಸದಸ್ಯರ ಆರೋಗ್ಯ ತಪಾಸಣಾ ಕೇಂದ್ರ ತೆರೆಯಲು ಹಾಗೂ ಸದಸ್ಯರುಗಳ ಕುಟುಂಬದ ಕಾರ್ಯಕ್ರಮಗಳನ್ನು ನಡೆಸಲು ಬೃಹತ್ ಸಭಾಂಗಣ ನಿರ್ಮಿಸಲಾಗುವುದು ಎಂದರು. ಈ ಬಾರಿಯ ಮಹಾಸಭೆ ತಾ. 13 ರಂದು ಬೆಳಿಗ್ಗೆ 11 ಗಂಟೆಗೆ ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪ ಸಭಾಂಗಣದಲ್ಲಿ ನಡೆಯಲಿದೆ. ಈ ಮಹಾಸಭೆಯಲ್ಲಿ ಸದಸ್ಯರ ಮಕ್ಕಳ ಪೈಕಿ 10ನೇ ತರಗತಿ, ದ್ವಿತೀಯ ಪಿಯುಸಿ, ಅಂತಿಮ ಪದವಿ ಪರೀಕ್ಷೆ ಮತ್ತಿತರ ಕೋರ್ಸ್‍ಗಳಲ್ಲಿ ಉತ್ತಮ ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಶರವಣ ತಿಳಿಸಿದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ಎಂ.ಎಂ. ಶಾಹಿರ್, ನಿರ್ದೇಶಕರುಗಳಾದ ಎಂ.ವಿ. ನಾರಾಯಣ, ಕೆ.ಎಸ್. ಮಹೇಶ್, ಕವಿತಾ ಮೋಹನ್, ಶರತ್, ಆರ್.ಕೆ. ನಾಗೇಂದ್ರ, ರಾಮಕೃಷ್ಣ, ಅಮೃತ್, ಶಿವಪ್ರಕಾಶ್, ನವೀನ್, ರೇಖಾ ರಾಜಶೇಖರ್, ವ್ಯವಸ್ಥಾಪಕ ಶ್ರೀಜೇಶ್, ರಾಜು ಇದ್ದರು.