ಗೋಣಿಕೊಪ್ಪ ವರದಿ, ಡಿ. 8: ಫೈಸೈಡ್ ರಿಂಕ್ ಹಾಕಿಯ 18 ವಯೋಮಿತಿಯ ಬಾಲಕರಲ್ಲಿ ಫಾಲ್ಕನ್ ಹಾಕಿ, ಮಹಿಳೆಯರಲ್ಲಿ ಪವಿನ್ ಪೊನ್ನಣ್ಣ ಫೌಂಡೇಷನ್ ಚಾಂಪಿಯನ್ ತಂಡವಾಗಿ ಹೊರಹೊಮ್ಮಿವೆ. ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಹಾಕಿ ಕರ್ನಾಟಕ, ಹಾಕಿ ಕೂರ್ಗ್ ಹಾಗೂ ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ಸಹಯೋಗದಲ್ಲಿ ನಡೆದ ಟೂರ್ನಿಯ ಅಂತಿಮ ಹಣಾಹಣಿಯಲ್ಲಿ ರೋಚಕ ಆಟ ಮೂಡಿಬಂತು. ಫೈನಲ್‍ನಲ್ಲಿ ಸೋಲನುಭವಿಸಿದ ಬಾಲಕರ ಅತ್ತೂರು, ಮಹಿಳೆಯರ ಸೌತ್‍ಕೂರ್ಗ್ ಕ್ಲಬ್ ತಂಡಗಳು ರನ್ನರ್ ಅಪ್‍ಗೆ ತೃಪ್ತಿಪಟ್ಟುಕೊಂಡವು. ಬಾಲಕರ ವಿಭಾಗ ; 18 ವಯೋಮಿತಿಯ ಬಾಲಕರಲ್ಲಿ ಫಾಲ್ಕನ್ ಹಾಕಿ ತಂಡವು ಅತ್ತೂರು ತಂಡವನ್ನು 7-2 ಗೋಲುಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಫಾಲ್ಕನ್ ತಂಡದ ರಾಜ್‍ಕುಮಾರ್ 3 ಗೋಲು ಹೊಡೆದು ಮಿಂಚಿದರು. ಉಜ್ವಲ್ 2, ದೀಪಕ್ ಎಕ್ಕಾ, ಅಮೋಲ್ ಎಕ್ಕಾ ತಲಾ ಒಂದೊಂದು ಗೋಲು, ಅತ್ತೂರು ತಂಡದ ಸಪನ್, ವಚನ್ ಗೋಲು ಹೊಡೆದರು.ಸೆಮಿಫೈನಲ್‍ನಲ್ಲಿ ಫಾಲ್ಕನ್ ತಂಡವು 5-4 ಅಂತರದಿಂದ ಕೋವಿಯಲ್ಪಟ್ಟಿ ವಿರುದ್ದ ಜಯಿಸಿತು. ಫಾಲ್ಕನ್ ತಂಡದ ದೀಕ್ಷಿತ್ 2, ಉಜ್ವಲ್, ರಾಜ್‍ಕುಮಾರ್, ದೀಪಕ್ ತಲಾ ಒಂದೊಂದು ಗೋಲು, ಕೋವಿಯಲ್ಪಟ್ಟಿ ತಂಡದ ಸತೀಶ್ 2, ಆನಂದ್, ಮುತ್ತುಕುಮಾರ್ ಒಂದೊಂದು ಗೋಲು ಬಾರಿಸಿದರು.
ಅತ್ತೂರು ತಂಡವು ಎಸ್‍ಆರ್‍ಸಿ ವಿರುದ್ಧ 3-2 ಗೋಲುಗಳಿಂದ ಜಯಿಸಿತು. ಅತ್ತೂರು ತಂಡದ ಬಿಪಿನ್, ಸಪನ್, ದ್ರುವ, ಎಸ್‍ಆರ್‍ಸಿ ತಂಡದ ದರ್ಶನ್ ಪೊನ್ನಣ್ಣ, ಗೌತಮ್ ತಲಾ ಒಂದೊಂದು ಗೋಲು ಬಾರಿಸಿದರು.
ಮಹಿಳೆಯರ ವಿಭಾಗ ; ಮಹಿಳೆಯರ ಫೈನಲ್ ಪಂದ್ಯದಲ್ಲಿ ಪವಿನ್ ಪೊನ್ನಣ್ಣ ಫೌಂಡೇಷನ್ ತಂಡವು ಸೌತ್‍ಕೂರ್ಗ್ ಕ್ಲಬ್ ವಿರುದ್ಧ ಸಡನ್‍ಡೆತ್ ಮೂಲಕ 5-4 ರೋಚಕ ಗೆಲುವಿನ ಮೂಲಕ ಪ್ರಶಸ್ತಿ ತನ್ನದಾಗಿಸಿಕೊಂಡಿತು. ವಿಜೇತ ತಂಡದ ಪೂಜಿತಾ ಹಾಗೂ ಅಂಜಲಿ ತಲಾ ಎರಡು ಗೋಲು ಹೊಡೆದರು. ಶಯಾ 1 ಗೋಲು ಹೊಡೆದರು. ಸೌತ್‍ಕೂರ್ಗ್ ತಂಡದ ದೀಪ್ತಿ 2 ಗೋಲು, ಹೇಮಾ, ಪವಿತ್ರ ತಲಾ ಒಂದೊಂದು ಗೋಲುಗಳ ಮೂಲಕ ಮಿಂಚಿದರು.
(ಮೊದಲ ಪುಟದಿಂದ) ನಿಗದಿತ ಸಮಯದಲ್ಲಿ ಉಭಯ ತಂಡಗಳು 2-2 ಗೋಲುಗಳ ಸಮನಾಂತರ ಸಾಧಿಸಿದ್ದವು.
ಇದಕ್ಕೂ ಮುನ್ನ ನಡೆದ ಸೆಮಿಯಲ್ಲಿ ಸೌತ್‍ಕೂರ್ಗ್ ಕ್ಲಬ್ ತಂಡವು ಶೂಟೌಟ್‍ನಲ್ಲಿ ಶಿವಾಜಿ ನಾಪೋಕ್ಲು ತಂಡವನ್ನು ಮಣಿಸಿತು. ಸೌತ್‍ಕೂರ್ಗ್ ತಂಡದ ಪವಿತ್ರ, ಹೇಮಾ ತಲಾ 2 ಗೋಲು, ಶಿವಾಜಿ ತಂಡದ ಚಂದನಾ, ನಿಶಾ, ಯಶಿಕಾ ಒಂದೊಂದು ಗೋಲು ಬಾರಿಸಿದರು.
ಪವಿನ್ ಪೊನ್ನಣ್ಣ ಫೌಂಡೇಷನ್ ಬಂಬ್ಲ್ ಬೀ ವಿರುದ್ಧ ಶೂಟೌಟ್‍ನಲ್ಲಿ 5-4 ಅಂತರದಿಂದ ಜಯಿಸಿತು. ಪವಿನ್ ತಂಡದ ಅಂಜಲಿ 2, ಶಯಾ, ಜೀವಿತಾ, ಪೂಜಿತಾ ತಲಾ 1 ಗೋಲು, ಬಂಬ್ಲ್ ಬೀ ತಂಡದ ದೇಚಮ್ಮ, ಮಿಲನಾ ತಲಾ 2 ಗೋಲು ಹೊಡೆದರು.
ಉತ್ತಮ ಅಟಗಾರರು ; ಬಾಲಕರ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಫಾಲ್ಕನ್ ಹಾಕಿ ಕ್ಲಬ್ ತಂಡದ ಆಟಗಾರ ಶಾನ್ ಮೊಣ್ಣಪ್ಪ, ಭವಿಷ್ಯದ ಆಟಗಾರನಾಗಿ ಧನುಷ್ ಕಾಳಪ್ಪ, ಉತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ದಿವಾಕರ್, ಉತ್ತಮ ಆಟಗಾರನಾಗಿ ಎಸ್‍ಆರ್‍ಸಿ ತಂಡದ ಮಂಡೇಪಂಡ ಗೌತಮ್, ಅತ್ತೂರು ತಂಡದ ಸಪನ್ ಅಯ್ಯಪ್ಪ ಪಡೆದರು.
ಮಹಿಳೆಯರ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೋಣಿಕೊಪ್ಪ ಸೌತ್‍ಕೂರ್ಗ್ ತಂಡದ ಅಂಜಲಿ, ಉತ್ತಮ ಆಟಗಾರ್ತಿಯಾಗಿ ಶಿವಾಜಿ ಫೈರ್ ಆಂಟ್ಸ್ ತಂಡದ ಸೌಮ್ಯಶ್ರೀ, ಸೌತ್‍ಕೂರ್ಗ್ ಕ್ಲಬ್ ತಂಡದ ದೀಪ್ತಿ, ಉತ್ತಮ ಗೋಲ್‍ಕೀಪರ್ ಪ್ರಶಸ್ತಿಯನ್ನು ರಾಕರ್ಸ್ ತಂಡದ ಚಿತ್ರಶ್ರೀ, ಭವಿಷ್ಯದ ಆಟಗಾರ್ತಿಯಾಗಿ ಬಂಬ್ಲ್ ಬೀ ತಂಡದ ಪಾಂಡಂಡ ದೇಚಮ್ಮ ಪಡೆದುಕೊಂಡರು.
ಮಹಿಳಾ ಹಾಕಿಗೆ ಕುಪ್ಪಂಡ ಕೆ. ದೇವಯ್ಯ ಜ್ಞಾಪಕಾರ್ಥ, ಬಾಲಕರ ಟೂರ್ನಿ ನೆಲ್ಲಮಕ್ಕಡ ತಿಮ್ಮಯ್ಯ ಜ್ಞಾಪಕಾರ್ಥದಲ್ಲಿ ನಡೆಯಿತು. ದಾನಿಗಳಾದ ಕೊಲ್ಲೀರ ಜೀತ್ ಪೂಣಚ್ಚ, ಉಷಾ ಪೂಣಚ್ಚ, ಕುಪ್ಪಂಡ ಗಿರಿ ಪೂವಣ್ಣ ಬಹುಮಾನ ವಿತರಣೆ ಮಾಡಿದರು. ಹಾಕಿಕೂರ್ಗ್ ಪ್ರಮುಖರಾದ ಬುಟ್ಟಿಯಂಡ ಚೆಂಗಪ್ಪ, ಕುಪ್ಪಂಡ ಸುಬ್ಬಯ್ಯ ಇತರರಿದ್ದರು. ಸುಳ್ಳಿಮಾಡ ಸುಬ್ಬಯ್ಯ ವೀಕ್ಷಕ ವಿವರಣೆ ನೀಡಿದರು.