ಮಡಿಕೇರಿ, ಡಿ. 8: ಬೈಕ್ ಅವಘಡಕ್ಕೆ ತುತ್ತಾಗಿ ಯುವಕನೋರ್ವ ಮೃತಪಟ್ಟಿರುವ ಘಟನೆ ಮಡಿಕೇರಿ ನಗರದಲ್ಲಿ ಕಳೆದ ರಾತ್ರಿ ಸಂಭವಿಸಿದೆ. ನಗರದ ಮಹದೇವಪೇಟೆ ಯಲ್ಲಿರುವ ನಾಜಾ ಟ್ರೇಡರ್ಸ್ ಸ್ಟೋರ್‍ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪವನ್ (21) ಎಂಬಾತ ಹೊಸದಾಗಿ ಪಲ್ಸರ್ ಬೈಕ್ ಖರೀದಿಸಿದ್ದು, ಚಾಲನೆಯಲ್ಲಿ ಅಷ್ಟೇನೂ ಪ್ರಾವೀಣ್ಯತೆ ಹೊಂದಿರಲಿಲ್ಲವೆನ್ನಲಾಗಿದೆ. ಕಳೆದ ರಾತ್ರಿ 9.30ರ ಸಮಯದಲ್ಲಿ ಈತ ಬೈಕ್ ಚಾಲಿಸಿಕೊಂಡು ನಗರಕ್ಕೆ ಬಂದಿದ್ದು, ಮುತ್ತಣ್ಣ ವೃತ್ತದ ಬಳಿ ಡಿಸಿಸಿ ಬ್ಯಾಂಕ್‍ನ ತಡೆಗೋಡೆಗೆ ಬೈಕ್ ನಿಯಂತ್ರಣ ತಪ್ಪಿ ಅಪ್ಪಳಿಸಿದೆ ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಪವನ್‍ನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈತ ಅರಕಲಗೋಡುವಿನ ಕಂಟೇನಹಳ್ಳಿಯ ಮಂಜೇಗೌಡ (ಮೊದಲ ಪುಟದಿಂದ) ಅವರ ಪುತ್ರನಾಗಿದ್ದು, ಕಳೆದ 7 ವರ್ಷದಿಂದ ನಗರದಲ್ಲಿ ಕೆಲಸ ಮಾಡುತ್ತಿದ್ದನೆಂದು ನಗರ ಸಂಚಾರಿ ಠಾಣಾಧಿಕಾರಿ ಬೆಳ್ಳಿಯಪ್ಪ ಅವರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಇಂದು ಮೃತದೇಹವನ್ನು ಅರಕಲಗೋಡುವಿಗೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಘಟನೆ ಬಗ್ಗೆ ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.