ಮಡಿಕೇರಿ: ದ.ಕೊಡಗಿನ ಬಾಳೆಲೆ ಸಮೀಪದ ನಿಟ್ಟೂರುವಿನಲ್ಲಿ (ಮಳ್ಳೂರು ಅಂಚೆ) ಹುಲಿ ದಾಳಿಗೆ ಹಸು ಬಲಿಯಾದ ಘಟನೆ ನಿನ್ನೆ ಸಂಜೆ ಸುಮಾರು 7:15 ಕ್ಕೆ ನಡೆದಿದೆ. ಗ್ರಾಮದ ವಾಣಂಡ ಪಿ. ಸಜನ್ ಎಂಬವರಿಗೆ ಸೇರಿದ ಗಬ್ಬದ ಹಸು ಹುಲಿ ದಾಳಿಗೆ ಬಲಿಯಾಗಿದೆ. 3 ದಿನಗಳ (ಮೊದಲ ಪುಟದಿಂದ) ಹಿಂದಷ್ಟೆ ಬಾಳೆಲೆ ಸಮೀಪದ ದೇವನೂರು ಗ್ರಾಮದ ಲಕ್ಷ್ಮೀಕಾಂತ್ ಎಂಬವರಿಗೆ ಸೇರಿದ ಹಸುವೊಂದನ್ನು ಹುಲಿ ಬಲಿ ಪಡೆದಿದ್ದು ಇದೀಗ 3 ದಿನಗಳಲ್ಲಿಯೇ ಮತ್ತೊಂದು ಹಸುವನ್ನು ಬಲಿ ಪಡೆದಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.ನಿನ್ನೆ ಸಂಜೆ ಸುಮಾರು 7:15 ಕ್ಕೆ ನಿಟ್ಟೂರು ವ್ಯಾಪ್ತಿಯಲ್ಲಿ ವಿದ್ಯುತ್ ಇಲ್ಲದ ಕಾರಣ ಸಂಪೂರ್ಣ ಕಗ್ಗತ್ತಲಾಗಿತ್ತು. ಇದನ್ನೆ ಬಳಸಿಕೊಂಡು ಹುಲಿಯು ಕೊಟ್ಟಿಗೆಗೆ ಕಟ್ಟಿದ್ದ ಹಸುವೊಂದನ್ನು ಬಲಿಪಡೆದಿದೆ. ಕೊಟ್ಟಿಗೆಯಲ್ಲಿದ್ದ ಹಸುಗಳು ಸಂಜೆ ವೇಳೆ ಅರಚಿಕೊಂಡಿವೆ. ಸಜನ್ ಅವರು ಹೊರಬಂದು ನೋಡುವಷ್ಟರಲ್ಲಿ ಕೊಟ್ಟಿಗೆಗೆ ಕಟ್ಟಿದ್ದ ಗಬ್ಬದ ಹಸುವನ್ನು ಹುಲಿಯು ಹಗ್ಗ ಸಮೇತ ಎಳೆದೊಯ್ದು ರಸ್ತೆ ಬದಿಯಲ್ಲಿ ಹಾಕಿದೆ. ಹುಲಿ ದಾಳಿಯಿಂದ ಹಸುವಿನ ಕುತ್ತಿಗೆಯ ಭಾಗಕ್ಕೆ ಗಾಯಗಳಾಗಿದ್ದು ಮೃತಪಟ್ಟಿದೆ. ಹುಲಿ ಸಮೀಪದಲ್ಲಿಯೇ ಇರಬಹುದೆಂದು ಪಟಾಕಿ ಸಿಡಿಸಿ ಹುಲಿಯನ್ನು ಓಡಿಸುವ ಯತ್ನ ಕೂಡ ಸಜನ್ ಅವರು ಮಾಡಿರುವುದಾಗಿ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.