ಮಡಿಕೇರಿ, ಡಿ. 7: ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಂತೆ ಭಾನುವಾರ ಕುಶಾಲನಗರ ವ್ಯಾಪ್ತಿಯಲ್ಲಿ ಗಸ್ತು ನಡೆಸುತ್ತಿದ್ದ ಸಂದರ್ಭದಲ್ಲಿ ಇನ್ನೋವಾ ಕ್ರಿಸ್ತ ವಾಹನದಲ್ಲಿ (ಕೆಎ. 45 ಎಂ.5216) ಅಕ್ರಮವಾಗಿ 10.5 ಲೀಟರ್ ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅಬಕಾರಿ ಕಾಯ್ದೆ 1965ರ ಕಲಂ 11, 14, 32 ಮತ್ತು 38(ಎ) ರಡಿಯಲ್ಲಿ ಪ್ರಕರಣ ದಾಖಲಿಸಿ ಇಬ್ಬರು ಆರೋಪಿಗಳನ್ನು ದಸ್ತಗಿರಿಪಡಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಪ್ರಕರಣದಲ್ಲಿ ಜಪ್ತುಪಡಿಸಲಾದ ವಾಹನ ಮತ್ತು ಮದ್ಯದ ಅಂದಾಜು ಮೌಲ್ಯ ರೂ.22,05,040 ನ್ನು ಇಲಾಖಾ ವಶಕ್ಕೆ ಪಡೆಯಲಾಗಿದೆ. ಪ್ರಕರಣವನ್ನು ಅಬಕಾರಿ ಉಪ ಆಯುಕ್ತರ ಕಚೇರಿಯ ಅಬಕಾರಿ ನಿರೀಕ್ಷಕ ಸಿ. ಲಕ್ಷ್ಮೀಶ ಅವರು ದಾಖಲಿಸಿದ್ದಾರೆ. ಪತ್ತೆ ಹಚ್ಚುವ ಸಂದರ್ಭದಲ್ಲಿ ಅಬಕಾರಿ ಇಲಾಖೆಯ ಹಿರಿಯ ರಕ್ಷಕ ಕೆ.ಎಸ್. ಉತ್ತಪ್ಪ, ಕೆ.ಎಸ್. ರಾಜು ಮತ್ತು ರಕ್ಷಕ ಶಿವಣ್ಣ, ವಾಹನ ಚಾಲಕ ಸುನೀಲ್ ಕುಶಾಲಪ್ಪ ಇತರರು ಇದ್ದರು.