ಮಡಿಕೇರಿ, ಡಿ. 7: ರಾಷ್ಟ್ರದ ಏಕತೆ, ಅಖಂಡತೆಗೆ ಬಲಿದಾನಗೈದ ವೀರಯೋಧರಿಗೆ ಗೌರವ ನಮನ ಸಲ್ಲಿಸುವ ಮೂಲಕ ನಗರದ ಸನ್ನಿಸೈಡ್‍ನ ಯುದ್ಧ ಸ್ಮಾರಕದಲ್ಲಿ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ನಡೆಯಿತು.

ಜಿಲ್ಲಾಡಳಿತ ಹಾಗೂ ಸೈನಿಕ ಕಲ್ಯಾಣ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಏರ್ ಮಾರ್ಷಲ್ (ನಿವೃತ್ತ) ಕೆ.ಸಿ. ಕಾರ್ಯಪ್ಪ, ಬ್ರಿಗೇಡಿಯರ್ (ನಿವೃತ್ತ) ಮುತ್ತಣ್ಣ, ಕರ್ನಲ್ (ನಿವೃತ್ತ) ಕೆ.ಸಿ. ಸುಬ್ಬಯ್ಯ, ಮೇಜರ್ (ನಿವೃತ್ತ) ನಂಜಪ್ಪ, ಮೇಜರ್ (ನಿವೃತ್ತ) ಒ.ಎಸ್. ಚಿಂಗಪ್ಪ, ಡಿವೈಎಸ್‍ಪಿ ದಿನೇಶ್ ಕುಮಾರ್, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ ಖಾಂದೂ, ಲೆ.ಕ. (ನಿವೃತ್ತ) ಗೀತಾ ಮತ್ತು ನಿವೃತ್ತ ಸೈನಿಕರು ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಚ ವಿಟ್ಟು ಗೌರವ ನಮನ ಸಲ್ಲಿಸಿದರು.

ಪೊಲೀಸ್ ತುಕಡಿಯಿಂದ ಮೂರು ಸುತ್ತು ಕುಶಲತೋಪುಗಳನ್ನು ಹಾರಿಸಿ ಯುದ್ಧ ಸ್ಮಾರಕಕ್ಕೆ ಗೌರವ ಸಲ್ಲಿಸಲಾಯಿತು ಹಾಗೂ ಎರಡು ನಿಮಿಷಗಳ ಮೌನಾಚರಿಸಲಾಯಿತು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು 2020ರ ಸಶಸ್ತ್ರ ಪಡೆಗಳ ಧ್ವಜಗಳನ್ನು ಬಿಡುಗಡೆ ಗೊಳಿಸಿದರು. ಸಾರ್ವಜನಿಕರಿಗೆ ಹಾಗೂ ಗಣ್ಯ ವ್ಯಕ್ತಿಗಳಿಗೆ ದ್ವಜಧಾರಣೆ ಮಾಡಲಾಯಿತು.

ಮಾಜಿ ಸೈನಿಕರು, ನಿವೃತ್ತ ಸೇನಾಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರು, ಪೊಲೀಸ್ ಕವಾಯತು ತುಕಡಿ, ಪೊಲೀಸ್ ಬ್ಯಾಂಡ್ ಸಿಬ್ಬಂದಿಗಳು ಇತರರು ಪಾಲ್ಗೊಂಡಿದ್ದರು.

ಅಸಾಧರಣ ಧೈರ್ಯ, ಅಪ್ರತಿಮ ಶೌರ್ಯ, ಸಾಹಸಕ್ಕೆ ಹೆಸರಾದ ಭಾರತೀಯ ಸೇನಾ ಪಡೆಗಳಿಗೆ ದೇಶದ ಸಮಗ್ರತೆ ಮತ್ತು ನಾಗರಿಕರ ಜೀವ ರಕ್ಷಣೆಯೇ ಪರಮ ಧ್ಯೇಯವಾಗಿದೆ ಎಂದು ಜಿಲ್ಲಾ ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಗೀತಾ ಅವರು ತಿಳಿಸಿದರು.