ಕಣಿವೆ/ ಕೂಡಿಗೆ, ಡಿ. 7: ಕಳೆದ ಹಲವು ದಿನಗಳಿಂದ ಕಂಡು ಬರುತ್ತಿರುವ ಮೋಡ ಕವಿದ ವಾತಾವರಣ ಭತ್ತದ ಕೃಷಿಕರನ್ನು ಕಂಗಾಲು ಮಾಡಿದೆ.‘‘ಓ ನಿಸರ್ಗವೇ ನಿನಗೆ ನಮ್ಮ ಮೇಲೇಕೆ ಮುನಿಸು’’ ಎಂದು ಕೃಷಿಕರು ರೋದಿಸುತ್ತಿದ್ದು, ‘‘ಕೃಪೆ ತೋರು ವರುಣ’’ ಎಂದು ನಿವೇದಿಸುತ್ತಿದ್ದಾರೆ.ಪ್ರತೀ ವರ್ಷದ ಚಳಿಗಾಲದ ಡಿಸೆಂಬರ್ ಆರಂಭದಲ್ಲಿ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ರೈತರು ಭತ್ತದ ಕಟಾವಿಗೆ ಸಿದ್ದತೆ ನಡೆಸುತ್ತಾರೆ. ಆದರೆ ಈ ಬಾರಿ ಕಳೆದ ಹದಿನೈದು ದಿನಗಳಿಂದಲೂ ನಿಸರ್ಗದ ಮೇಲಾಗುತ್ತಿರುವ ಚಂಡ ಮಾರುತದ ರೋದನದಿಂದಾಗಿ ಕೃಷಿಕ ಕಂಗಾಲಾಗು ವಂತಾಗಿದೆ. ಗದ್ದೆಗಳಲ್ಲಿ ಬೆಳೆದು ನಿಂತಿರುವ ಭತ್ತದ ಫಸಲನ್ನು ಕಟಾವು ಮಾಡಿ ಸಂತಸದಿಂದ ಧಾನ್ಯ ಲಕ್ಷ್ಮಿಯನ್ನು ಮನೆಗಳಿಗೆ ತುಂಬಿಸಿಕೊಳ್ಳಬೇಕಿದ್ದ ರೈತರ ಮನದಲ್ಲಿ ನಿಸರ್ಗ ಸಂಕಟ ಉಂಟು ಮಾಡುತ್ತಿದೆ.ಬಂಗಾಳಕೊಲ್ಲಿ ತೀರದ ಆಸುಪಾಸಿನ ರಾಜ್ಯಗಳಿಗೆ ಇತ್ತೀಚೆಗೆ ಬಾಧಿಸುತ್ತಿರುವ ನಿವಾರ್ ಹಾಗೂ ಬುರೆವಿ ಚಂಡಮಾರುತಗಳ ಸಾಲಿಗೆ ಇದೀಗ ಹೊಸದಾಗಿ ಅಲೆ ಎಬ್ಬಿಸಲಿದೆ ಎಂದು ಹವಾಮಾನ ಇಲಾಖೆ ಹೇಳುತ್ತಿರುವ "ಅರ್ನಾಬ್" ಎಂಬ ಚಂಡಮಾರುತ

(ಮೊದಲ ಪುಟದಿಂದ) ಭತ್ತದ ಬೆಳೆಗಾರರಲ್ಲಿ ಭಾರೀ ಆತಂಕವನ್ನು ಉಂಟುಮಾಡಿದೆ.

‘ನಿವಾರ್’ ಚಂಡಮಾರುತಕ್ಕೂ ಮುನ್ನ ಅರಬ್ಬಿಸಮುದ್ರ ಹಾಗೂ ಬಂಗಾಳ ಕೊಲ್ಲಿಗಳಲ್ಲಿ ಈ ಹಿಂದೆ ಅಪಾರ ಆಸ್ತಿ ಪಾಸ್ತಿ ನಷ್ಟ ಮಾಡಿದ ಫನಿ, ವಾಯು, ಬುಲ್ ಬುಲ್, ಹಿಕ್ಕಾ, ಅಂಫಾನ್, ನಿಸರ್ಗ, ನಿವಾರ್ ಹಾಗೂ ಬುರೆವಿ ಎಂಬ ಚಂಡಮಾರುತಗಳ ಬಳಿಕ ಈಗ ಅರ್ನಾಬ್ ಚಂಡಮಾರುತ ಯಾವ ರೂಪು ತಳೆಯುತ್ತದೆಯೋ ತಿಳಿಯದಾಗಿದೆ.

ಒಟ್ಟಾರೆ ಕೊರೊನಾ ಸಂಕಷ್ಟದ ನಡುವೆಯೂ ಕಳೆದ ನೂರು ದಿನಗಳ ಹಿಂದೆ ನಾಟಿ ಮಾಡಿ ಬೆಳೆದಿದ್ದ ಭತ್ತ ಕಟಾವಿಗೆ ಬಂದಿರುವುದರಿಂದ ಯಾವುದೇ ಹಾನಿಯಿಲ್ಲದೇ ರೈತಾಪಿಗಳು ನೆಮ್ಮದಿಯಿಂದ ಕಟಾವು ಮಾಡುವಂತಹ ವಾತಾವರಣ ನಿರ್ಮಾಣವಾಗಲೀ ಎಂಬುದು ರೈತರ ನಿವೇದನೆಯಾಗಿದೆ.

ಕೂಡಿಗೆ ವ್ಯಾಪ್ತಿಯಲ್ಲಿ ಉದುರುತ್ತಿರುವ ಭತ್ತದ ಕಾಳುಗಳು

ಮೋಡ ಕವಿದ ವಾತಾವರಣ ದಿಂದ ಇದೀಗ ಕೂಡಿಗೆ ವ್ಯಾಪ್ತಿಯಲ್ಲಿ ತುಂತುರು ಮಳೆ ಬೀಳುತ್ತಿರುವುದರಿಂದ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಪ್ರದೇಶದಲ್ಲೂ ಭತ್ತದ ಕಾಳುಗಳು ಉದುರುತ್ತಿವೆ.

ತೊರೆನೂರು, ಹೆಬ್ಬಾಲೆ, ಶಿರಂಗಾಲ, ಹುದುಗೂರು, ಮದಲಾಪುರ, ಕಣಿವೆ, ಹುಲುಸೆ, ಕೂಡಿಗೆ ವ್ಯಾಪ್ತಿಗಳಲ್ಲಿ ಈಗಾಗಲೇ ಭತ್ತದ ಬೆಳೆಯನ್ನು ಅನೇಕ ರೈತರು ಕೊಯ್ಯುವ ಕೆಲಸದಲ್ಲಿ ತೊಡಗಿದ್ದಾರೆ. ಆದರೆ ಕಳೆದ ವಾರದಲ್ಲಿ ಬಿಸಿಲಿನ ವಾತಾವರಣ ಇದ್ದುದರಿಂದ ಹಾಗೂ ಬೆಳೆಯು ಕೊಯ್ಲಿಗೆ ಬಂದಿರುವು ದರಿಂದ ಅನೇಕ ರೈತರು ಭತ್ತದ ಬೆಳೆಯನ್ನು ಕಟಾವು ಮಾಡಿದರು. ಇದೀಗ ಭಾರೀ ಮೋಡ ಕವಿದ ವಾತಾವರಣದ ಜೊತೆಗೆ ಮಳೆ ಬೀಳುತ್ತಿರುವುದರಿಂದ ಗದ್ದೆಗಳಲ್ಲಿ ಕುಯ್ಯದ ಭತ್ತದ ಕಾಳುಗಳು ಉದುರುತ್ತಿವೆ. ಅಲ್ಲದೇ ಈ ಭಾಗದಲ್ಲಿ ಹೆಚ್ಚು ರೈತರು ಹೈನುಗಾರಿಕೆಯಲ್ಲಿ ತೊಡಗಿರುವು ದರಿಂದ ಅವರುಗಳಿಗೆ ಭತ್ತಕ್ಕಿಂತ ಹಸುಗಳಿಗೆ ಹುಲ್ಲು ಮುಖ್ಯ ವಾಗಿರುತ್ತದೆ ಆದರೆ ತುಂತುರು ಮಳೆಯಿಂದಾಗಿ ಇದಕ್ಕೂ ಅಡ್ಡಿಯಾಗಿದೆ.