ಸಿದ್ದಾಪುರ, ಡಿ. 6: ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು, ವಿವಿಧ ರಾಜಕೀಯ ಪಕ್ಷಗಳು ಚುನಾವಣಾ ಸಿದ್ಧತೆಯಲ್ಲಿ ತೊಡಗಿವೆ. ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಕಸರತ್ತು ಪ್ರಾರಂಭಿಸಿದ್ದಾರೆ. ಈ ಮಧ್ಯೆ ಮತದಾರರ ಪಟ್ಟಿಯಲ್ಲಿ ಲೋಪಗಳು ಇರುವುದರ ಬಗ್ಗೆ ಆರೋಪಗಳು ಸಹ ಕೇಳಿ ಬಂದಿದೆ. ಮತದಾರರ ಪಟ್ಟಿಗೆ ಸೇರ್ಪಡೆಗಾಗಿ 18 ವರ್ಷ ತುಂಬಿದವರ ಅಗತ್ಯ ದಾಖಲೆಗಳನ್ನು ಸಲ್ಲಿಸಿ ತಿಂಗಳುಗಳು ಕಳೆದರೂ ಹಲವರ ಹೆಸರುಗಳು ಇನ್ನೂ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ ಎಂದು ಸಿದ್ದಾಪುರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳು ಆರೋಪಿಸಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲಿರುವ ಕೆಲವು ಅಭ್ಯರ್ಥಿಗಳು ತಮಗೆ ಬೇಕಾದವರ ಹೆಸರುಗಳನ್ನು ಮತದಾರರು ವಾಸವಿರುವ ವಾರ್ಡ್‍ನಿಂದ ಬೇರೆ ವಾರ್ಡ್‍ಗಳಿಗೆ ವರ್ಗಾಯಿಸಿರುವ ಆರೋಪಗಳು ಸಹ ಸಾರ್ವಜನಿಕರಿಂದ ಕೇಳಿ ಬಂದಿದೆ. ಅಲ್ಲದೆ ಸಿದ್ದಾಪುರ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮತ್ತು ವಲಯ ಕಾಂಗ್ರೆಸ್ ಅಧ್ಯಕ್ಷ ಎಂ.ಹೆಚ್. ಮೂಸಾ ಅವರ ಹೆಸರು ಕರಡಿಗೋಡು 4 ನೇ ವಾರ್ಡಿನ ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದೆ. ಬೂತ್ ಮಟ್ಟದ ಅಧಿಕಾರಿಯ ನಿರ್ಲಕ್ಷ್ಯದಿಂದ ತನ್ನ ಹೆಸರು ಬಿಟ್ಟು ಹೋಗಿದ್ದು, ತಾನು ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂದು ಕಾಣದ ಕೈಗಳು ಮಾಡಿರುವ ಕುತಂತ್ರ ಕೂಡಾ ಆಗಿರಬಹುದು ಎಂದು ಮೂಸಾ ಅಭಿಪ್ರಾಯಪಟ್ಟಿದ್ದಾರೆ. ಸರಿಪಡಿಸಲಾಗುವದು ಎಂದು ಬೂತ್ ಮಟ್ಟದ ಅಧಿಕಾರಿ ಆಶಾ ತಿಳಿಸಿದ್ದಾರೆ. - ವಾಸು