ಕುಶಾಲನಗರ, ಡಿ. 6: ಕುಶಾಲನಗರ ದಲ್ಲಿ ವಾಣಿಜ್ಯ ಸಂಕೀರ್ಣ ಕಾಮಗಾರಿ ಮತ್ತೆ ಕೈಗೆತ್ತಿಕೊಳ್ಳುವುದ ರೊಂದಿಗೆ ಮುಂದಿನ ಕೆಲವೇ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಬಿ.ಜೈವರ್ಧನ್ ತಿಳಿಸಿದ್ದಾರೆ. ಅವರು ‘ಶಕ್ತಿ’ಯೊಂದಿಗೆ ಮಾತನಾಡಿ, ಅಂದಾಜು 5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡ ಕಾಮಗಾರಿ ಸದ್ಯ ಸ್ಥಗಿತಗೊಂಡಿದೆ. ಇದರೊಂದಿಗೆ ವ್ಯಾಜ್ಯದಲ್ಲಿರುವ ಕಟ್ಟಡಗಳ ತೆರವು ಕಾರ್ಯ ಕೂಡ ಸದÀ್ಯದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈಗಾಗಲೆ ಕೈಗೊಂಡಿರುವ ಕಾಮಗಾರಿಗೆ 2.38 ಕೋಟಿ ರೂ.ಗಳ ಪಾವತಿಯಾಗಿದ್ದು ಈ ಬಗ್ಗೆ ಲೆಕ್ಕಾಚಾರ ಪರಿಶೀಲನೆಯಾಗುತ್ತಿದೆ ಎಂದು ತಿಳಿಸಿರುವ ಜೈವರ್ಧನ್, ಕುಶಾಲನಗರದಲ್ಲಿ ಬಾಕಿ ಉಳಿದಿರುವ ವಿವಿಧ ಯೋಜನೆಗಳನ್ನು ಸದÀ್ಯದಲ್ಲಿಯೇ ಕೈಗೆತ್ತಿಕೊಂಡು ಪೂರ್ಣಗೊಳಿಸಲು ಕ್ಷೇತ್ರದ ಶಾಸಕರಾದ ಎಂ.ಪಿ. ಅಪ್ಪಚ್ಚುರಂಜನ್ ಅವರೊಂದಿಗೆ ಮನವಿ ಮಾಡಲಾಗಿದೆ. ಕುಶಾಲನಗರ ಒಳಚರಂಡಿ ಯೋಜನೆಯ ಉಳಿದ ಭಾಗದ ಕಾಮಗಾರಿಗೆ ರೂ 18 ಕೋಟಿ ಬಿಡುಗಡೆಯಾಗಿದ್ದು ಒಳಚರಂಡಿ ಮಂಡಳಿ ಮೂಲಕ ಮತ್ತೆ ಕಾಮಗಾರಿ ಪ್ರಾರಂಭಗೊಂಡಿದೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ ಕೆಲಸ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು.
ಪಟ್ಟಣದ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ಕಲ್ಪಿಸಲಾಗುತ್ತಿದ್ದು ಕೊಳಚೆ ಕಲುಷಿತ ನೀರು ನೇರವಾಗಿ ನದಿಗೆ ಹರಿಸದಂತೆ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಮೈಸೂರು ರಸ್ತೆ ಬದಿಯಲ್ಲಿ ನಿಂತಿರುವ ಚರಂಡಿ ನೀರನ್ನು ಶುದ್ಧೀಕರಿಸಿ ವಿಲೇವಾರಿ ಮಾಡಲು ಮೈಸೂರಿನ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಇದೇ ರೀತಿ ಪಟ್ಟಣದ ಹಲವು ಕಡೆ ನದಿಗೆ ಹರಿಯುವ ಕಲುಷಿತ ನೀರನ್ನು ನೇರವಾಗಿ ನದಿ ಸೇರದಂತೆ ಸ್ಥಳ ಪರಿಶೀಲನೆ ನಡೆಸಿದ್ದು ಮುಂದಿನ ಕೆಲವೇ ದಿನಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ತಿಳಿಸಿದ ಜೈವರ್ಧನ್, ಸ್ವಚ್ಚ ಕಾವೇರಿಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳ ಲಾಗುವುದು. ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿಯ ಪ್ರಮುಖರೊಂದಿಗೆ ಈ ಬಗ್ಗೆ ಚರ್ಚಿಸಲಾಗಿದೆ ಎಂದರು.
ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಸೋಪಾನಕಟ್ಟೆ ವ್ಯಾಪ್ತಿಯಲ್ಲಿ ಇರುವ ಸ್ವಚ್ಛತೆಯಂತೆ ಎಲ್ಲಾ ಸೋಪಾನಕಟ್ಟೆಗಳಲ್ಲಿಯೂ ಸ್ವಚ್ಚತೆಗೆ ಆದ್ಯತೆ ಕಲ್ಪಿಸಲಾಗಿದೆ ಎಂದಿದ್ದಾರೆ. ಪಟ್ಟಣದಲ್ಲಿ ಒತ್ತುವರಿಯಾಗಿರುವ ಸರಕಾರಿ, ಸಾರ್ವಜನಿಕ ಉಪಯೋಗಕ್ಕೆ ಮೀಸಲಾದ ಜಾಗಗಳನ್ನು ಪ್ರತಿ ವಾರ್ಡ್‍ಗಳಲ್ಲಿ ಗುರುತಿಸಿ ಪಂಚಾಯ್ತಿ ವಶಕ್ಕೆ ಪಡೆಯಲಾಗುವುದು. ಪಪಂಯಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ನಾಗರಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದರೊಂದಿಗೆ ಕಾಲಮಿತಿ ಯಲ್ಲಿ ಕೆಲಸ ನಿರ್ವಹಿಸುವುದು, ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು ಈ ನಿಟ್ಟಿನಲ್ಲಿ ಈಗಾಗಲೆ ಹಲವು ಸಭೆಗಳನ್ನು ಕರೆದು ಕಛೇರಿ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಆಸ್ತಿ ತೆರಿಗೆ ವಸೂಲಾತಿ, ವ್ಯಾಪಾರ ಉದ್ದಿಮೆ ಪರವಾನಗಿ, ಇ-ಆಸ್ತಿ ದಾಖಲಾತಿಗೆ ಸಂಬಂಧಿಸಿದಂತೆ ಅದಾಲತ್ ಕೈಗೊಳ್ಳುವುದು, ಪಟ್ಟಣದಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆ ಮತ್ತು ಪ್ಲಾಸ್ಟಿಕ್ ಬ್ಯಾನ್ ಮಾಡುವ ಬಗ್ಗೆ ಸದಸ್ಯರಲ್ಲಿ ಚರ್ಚಿಸಲಾಗಿದೆ. ಪಟ್ಟಣದಲ್ಲಿ ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾದ ಅನುದಾನ ಸೌಲಭ್ಯವನ್ನು ಸಮರ್ಪಕವಾಗಿ ಫಲಾನುಭವಿಗಳಿಗೆ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯಾವುದೇ ರೀತಿಯಲ್ಲಿ ಅನುದಾನ ಬೇರೆ ಇಲಾಖೆಗೆ ಅಥವಾ ಸರಕಾರಕ್ಕೆ ಹಿಂತಿರುಗಿಸದಂತೆ ತಿಳಿಸಲಾಗಿದ್ದು, ಫಲಾನುಭವಿಗಳಿಗೆ ಒದಗಿಸಲಾಗುವುದು ಎಂದಿದ್ದಾರೆ.
ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ರುವ ನಿವಾಸಿಗಳಿಗೆ ವಾಸ ದೃಢೀಕರಣ ಪತ್ರವನ್ನು ಮುಂದಿನ ದಿನಗಳಲ್ಲಿ ನಾಡಕಛೇರಿಯಿಂದ ಪಡೆಯುವ ವ್ಯವಸ್ಥೆ ಮುಂದುವರೆಯಲಿದೆ. ಒಟ್ಟಾರೆ ಕುಶಾಲನಗರ ಪಪಂ ವ್ಯಾಪ್ತಿಯಲ್ಲಿ ಇರುವ ಬಡಾವಣೆಗಳ ನಾಗರಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ ನೀಡುವುದರೊಂದಿಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಮಾದರಿ ಪಟ್ಟಣವನ್ನಾಗಿ ರೂಪಿಸಲು ಪಣತೊಟ್ಟಿರುವುದಾಗಿ ಜೈವರ್ಧನ್ ತಿಳಿಸಿದ್ದಾರೆ.
-ವರದಿ: ಚಂದ್ರಮೋಹನ್