ಕಾಳೇಗೌಡ ನಾಗವಾರ
ಮಡಿಕೇರಿ, ಡಿ. 5: ಪಂಚ ದ್ರಾವಿಡ ಭಾಷೆಗಳಿಗೆ ‘ಕೊಡವ’ ಭಾಷೆ ಮೂಲ ಎನ್ನುವ ವಾದಗಳ ಹಿನ್ನೆಲೆಯಲ್ಲಿ ಅಗತ್ಯ ಸಂಶೋಧನೆಗಳು ನಡೆಯುವುದು ಅಗತ್ಯವೆಂದು ಕನ್ನಡದ ಹಿರಿಯ ಸಾಹಿತಿಗಳಲ್ಲಿ ಒಬ್ಬರಾದ ಪ್ರೊ. ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವ ಭಾಷೆ ಇತರೆ ಎಲ್ಲಾ ಭಾಷೆಗಳ ಒಳಿತನ್ನು ತನ್ನದಾಗಿಸಿಕೊಂಡು ಬೆಳೆದಿರುವ ಸುಂದರ ಭಾಷೆ. ಯಾವುದೇ ಭಾಷೆ ಸಣ್ಣ ಸಮೂಹದ್ದೆಂದು ಅದರ ಮಹತ್ವ, ಅದರಲ್ಲಿನ ಸಂಸ್ಕøತಿ, ಪರಂಪರೆ ಗಳೆಂದಿಗೂ ಸಣ್ಣದಲ್ಲವೆಂದು ದೃಢವಾಗಿ ನುಡಿದು, ಇಡೀ ರಾಷ್ಟ್ರದ ಅತ್ಯಂತ ಪುಟ್ಟ ಜಿಲ್ಲೆಗಳಲ್ಲಿ ಒಂದಾಗಿರುವ ಕೊಡಗು, ಯೋಧರ ನಾಡು. ಇಲ್ಲಿನ ನಿವಾಸಿಗಳು ಬ್ರಿಟೀಷರ ಆಳ್ವಿಕೆಯ ಹಂತದಲ್ಲಿ ಶಿಕ್ಷಣವನ್ನು ಬದುಕಿನ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡ ವರಾಗಿದ್ದು, ಇಲ್ಲಿನ ಕೊಡವ ಸಮೂಹದಲ್ಲಿ ಶಿಕ್ಷಣ ವಂಚಿತರು ಎನ್ನುವ ವ್ಯಕ್ತಿ ಇಲ್ಲ ಎನ್ನುವುದು ನಿಜಕ್ಕೂ ಹೆಮ್ಮೆಯ ವಿಚಾರವೆಂದು ಮೆಚ್ಚುಗೆಯ ನುಡಿಗಳನ್ನಾಡಿದರು.
ಜನತಂತ್ರ ವ್ಯವಸ್ಥೆಯಲ್ಲಿ ಜನತೆ ಮತ್ತು ಜನ ಭಾಷೆಗೆ ಹೆಚ್ಚಿನ ಗೌರವ ಇರಬೇಕಾಗಿರುವುದು ಅತ್ಯವಶ್ಯವೆಂದು ತಿಳಿಸಿದ ಕಾಳೇಗೌಡ ನಾಗವಾರ, ಈ ಹಿನ್ನೆಲೆಯಲ್ಲೆ ಯಾವುದೇ ಭಾಷೆಯಲ್ಲೂ ಭೇದಗಳಿರ ಕೂಡದು. ಪಂಚಭೂತ ಗಳಲ್ಲಿ ಯಾವುದೇ ಭೇದವೂ ಇಲ್ಲದಿರುವಾಗÀ ಮನುಷ್ಯನಲ್ಲಿ ಭೇದಭಾವಗಳು ಏಕೆಂದು ಪ್ರಶ್ನಿಸಿದರು.
ಸುಸಂಸ್ಕøತವಾದ ಹೊಸ ಸಮಾಜವನ್ನು ಕಟ್ಟುವ ಸಾಮೂಹಿಕ ಹೊಣೆಗಾರಿಕೆಯನ್ನು ಪ್ರತಿಯೊಬ್ಬರು ಹೊರಬೇಕೆಂದು ಇದೇ ಸಂದರ್ಭ ಅಭಿಪ್ರಾಯಿಸಿ, ತಪ್ಪು ಒಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯುವ ವಿಶಾಲ ಮನೋಭಾವ ಅತ್ಯವಶ್ಯ. ರಾಷ್ಟ್ರಕವಿ ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟವಾಗಿ ಇಡೀ ಮನು ಕುಲ ಒಂದಾಗಿ ಹೊರ ಹೊಮ್ಮುವಂತಾಗಬೇಕೆನ್ನುವ ಆಶಯ ವ್ಯಕ್ತಪಡಿಸಿದರು.