ಸೋಮವಾರಪೇಟೆ, ಡಿ. 5: ಸೋಮವಾರಪೇಟೆ ಪ.ಪಂ.ಯ ಸುತ್ತಮುತ್ತಲ ಗ್ರಾಮಗಳನ್ನು ಒಳಗೊಂಡಂತೆ ಗಡಿ ವಿಸ್ತರಿಸಿ ಪುರಸಭೆಯನ್ನಾಗಿ ಮೇಲ್ದರ್ಜೆ ಗೇರಿಸಲು ಸರ್ಕಾರದ ಮಟ್ಟದಲ್ಲಿ ಕ್ರಮ ವಹಿಸಲಾಗುವದು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಇಲ್ಲಿನ ಪ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ನಳಿನಿ ಗಣೇಶ್ ಅಧ್ಯಕ್ಷತೆಯಲ್ಲಿ ನಡೆದ ಪ.ಪಂ. ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಕೆಲ ಸಮಯದಿಂದ ಈ ಬಗ್ಗೆ ಪ್ರಸ್ತಾವನೆಗಳು ಸಲ್ಲಿಕೆಯಾಗುತ್ತಿದ್ದು, ಗಡಿವಿಸ್ತರಣೆಯ ಕಡತಗಳನ್ನು ಹೊಂದಿಸಿದರೆ ಸರ್ಕಾರದ ಮಟ್ಟದಲ್ಲಿ ವ್ಯವಹರಿಸುವದಾಗಿ ಶಾಸಕರು, ಪ.ಪಂ. ಜನಪ್ರತಿನಿಧಿಗಳಿಗೆ ತಿಳಿಸಿದರು.

ಸೋಮವಾರಪೇಟೆ ಪ.ಪಂ.ಗೆ ಒತ್ತಿಕೊಂಡಂತಿರುವ ಹಾನಗಲ್ಲು, ಚೌಡ್ಲು, ಬೇಳೂರು ಗ್ರಾ.ಪಂ.ಯ ಕೆಲ ಗ್ರಾಮಗಳನ್ನು ಪಟ್ಟಣಕ್ಕೆ ಸೇರ್ಪಡೆ ಗೊಳಿಸುವ ಸಂಬಂಧ ಈಗಾಗಲೇ ಸಲ್ಲಿಕೆಯಾಗಿರುವ ಪ್ರಸ್ತಾವನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಶಾಸಕರು ಸೂಚಿಸಿದರು.

ಪಟ್ಟಣ ವ್ಯಾಪ್ತಿಯಲ್ಲಿ ವೈಜ್ಞಾನಿಕ ಕಸ ವಿಲೇವಾರಿಯೊಂದಿಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಸಾರ್ವಜನಿಕರೇ ಪ್ರಶ್ನಿಸಿ ಅವರಿಂದಲೇ ಕಸ ತೆಗೆಸಬೇಕು. ಸ್ವಚ್ಛತೆಯ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸಬೇಕು ಎಂದು ರಂಜನ್ ತಿಳಿಸಿದರು.

ಇಲ್ಲಿನ ಮಾರುಕಟ್ಟೆ ಏರಿಯಾದಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣ ವಾಗುತ್ತಿದ್ದು, ಈ ಬಗ್ಗೆ ಪಂಚಾಯಿತಿ ಗಮನ ಹರಿಸಬೇಕು. ಆನೆಕೆರೆ ಪುನಶ್ಚೇತನಕ್ಕೆ ಕ್ರಮವಹಿಸಬೇಕೆಂದು ಸದಸ್ಯೆ ಶೀಲಾ ಡಿಸೋಜ ಸಭೆಯ ಗಮನ ಸೆಳೆದರು.

ಅನುದಾನ ಕೊರತೆಯಿಂದ ಪಾಳು ಬಿದ್ದಿರುವ ಶತಮಾನೋತ್ಸವ ಭವನ ಕಾಮಗಾರಿಯನ್ನು ಪೂರ್ಣ ಗೊಳಿಸಲು ಕ್ರಮ ವಹಿಸಬೇಕೆಂದು ಸದಸ್ಯ ಎಸ್. ಮಹೇಶ್ ಅವರು ಶಾಸಕರ ಗಮನ ಸೆಳೆದರು. ಈ ಬಗ್ಗೆ ತನ್ನ ಬಳಿ ಯಾವದೇ ಮಾಹಿತಿ ಇಲ್ಲ. ಇದಕ್ಕೆ ಸಂಬಂಧಿಸಿದ ಕಡತಗಳನ್ನು ನೀಡಿದರೆ ಶತಮಾನೋತ್ಸವ ಭವನವನ್ನು ಪೂರ್ಣಗೊಳಿಸುವ ಜವಾಬ್ದಾರಿ ಹೊರುವದಾಗಿ ಶಾಸಕರು ತಿಳಿಸಿದರು.

10 ಕೋಟಿಗೆ ಬೇಡಿಕೆ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 10 ಕೋಟಿ ಅನುದಾನ ಒದಗಿಸುವಂತೆ ಎಸ್. ಮಹೇಶ್ ಅವರು ಶಾಸಕರಿಗೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಕುಶಾಲನಗರ ವ್ಯಾಪ್ತಿಯಲ್ಲಿ ಸರ್ಕಾರಿ ಪೈಸಾರಿ ಜಾಗ ಸಾಕಷ್ಟಿದೆ. ಸೋಮವಾರಪೇಟೆಯಲ್ಲಿ ಜಾಗದ ಸಮಸ್ಯೆ ಇದ್ದು, ಪಂಚಾಯಿತಿ ವತಿಯಿಂದ ಜಾಗ ಗುರುತಿಸಿದರೆ ನೂತನ ಯೋಜನೆಗಳನ್ನು ಅನುಷ್ಠಾನ ಗೊಳಿಸಲಾಗುವದು. ಈಗಾಗಲೇ ಸೋಮವಾರಪೇಟೆಯಲ್ಲಿ ಕ್ರೀಡಾ ಶಾಲೆ ತೆರೆಯಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

ಸರ್ಕಾರಿ ಹೋಮಿಯೋಪತಿ ಆಸ್ಪತ್ರೆಯ ಮುಂಭಾಗ ಅಬಕಾರಿ ಇಲಾಖೆ ವಶಪಡಿಸಿಕೊಂಡ ವಾಹನ ಗಳನ್ನು ನಿಲ್ಲಿಸಲಾಗಿದ್ದು, ಇದರಿಂದಾಗಿ ವಾಹನ ಹಾಗೂ ಜನ ಸಂಚಾರಕ್ಕೆ ತೊಡಕಾಗಿದೆ ಎಂದು ಸದಸ್ಯೆ ನಾಗರತ್ನ ಹೇಳಿದರು. ಸಂಬಂಧಿಸಿದ ಇಲಾಖೆಗೆ ನೋಟೀಸ್ ನೀಡಿ, ವಾಹನಗಳ ತೆರವಿಗೆ ಕ್ರಮವಹಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ವಾರ್ಡ್ 7ರಲ್ಲಿ ತಡೆಗೋಡೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾ ಗಿದ್ದು, ಗುತ್ತಿಗೆದಾರರೋರ್ವರು ಶೇ. 30 ರಷ್ಟು ಕಡಿಮೆಗೆ ಟೆಂಡರ್ ಕರೆದು ಮೂರು ವರ್ಷವಾದರೂ ಕಾಮಗಾರಿ ಪ್ರಾರಂಭಿಸಿಲ್ಲ ಎಂದು ಸದಸ್ಯ ಜೀವನ್ ಆರೋಪಿಸಿದರು. ಕಡಿಮೆ ಮೊತ್ತಕ್ಕೆ ಟೆಂಡರ್ ಕರೆದು ಕಾಮಗಾರಿ ನಿರ್ವಹಿಸದ ಗುತ್ತಿಗೆದಾರರಿಗೆ ಮುಂದಿನ ಯಾವದೇ ಟೆಂಡರ್‍ನಲ್ಲಿ ಭಾಗವಹಿಸಲು ಅವಕಾಶ ನೀಡ ಬಾರದು. ಈ ಬಗ್ಗೆ ನಿರ್ಣಯ ಕೈಗೊಳ್ಳುವಂತೆ ಶಾಸಕರು ನಿರ್ದೇಶನ ನೀಡಿದರು.

ಜೇಸೀ ವೇದಿಕೆ ಮುಂಭಾಗ ಅರ್ಧಕ್ಕೆ ಸ್ಥಗಿತಗೊಂಡಿರುವ ಕಟ್ಟಡ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಒದಗಿಸುವಂತೆ ಅಪ್ಪಚ್ಚು ರಂಜನ್ ಅವರು, ಪ.ಪಂ. ಅಭಿಯಂತರ ಹೇಮಂತ್ ಅವರಿಗೆ ಸೂಚಿಸಿದರು.

ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಫಿಲ್ಟರ್ ಹೌಸ್‍ನಲ್ಲಿ ಯಾವದೇ ಭದ್ರತೆ ಇಲ್ಲ ಎಂದು ಉಪಾಧ್ಯಕ್ಷ ಸಂಜೀವ ಹಾಗೂ ಸದಸ್ಯ ಮಹೇಶ್ ಸಭೆಯ ಗಮನ ಸೆಳೆದರು. ತಕ್ಷಣ ಫಿಲ್ಟರ್ ಹೌಸ್ ಸುತ್ತಲೂ ಆವರಣ ಗೋಡೆ ನಿರ್ಮಿಸಿ, ಮೇಲ್ಭಾಗದಲ್ಲಿ ಮುಳ್ಳುತಂತಿ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ರಂಜನ್ ನಿರ್ದೇಶನ ನೀಡಿದರು.

ಪಟ್ಟಣದಲ್ಲಿರುವ ಸಾರ್ವಜನಿಕ ಶೌಚಾಲಯಗಳು ನಿರ್ವಹಣೆಯ ಕೊರತೆ ಎದುರಿಸುತ್ತಿವೆ ಎಂದು ಸದಸ್ಯರುಗಳಾದ ಬಿ.ಆರ್. ಮಹೇಶ್, ಎಸ್ ಮಹೇಶ್ ಅವರುಗಳು ಸಭೆಯ ಗಮನ ಸೆಳೆದರು. ಈಗಿರುವ ಶೌಚಾಲಗಳನ್ನು ದುರಸ್ತಿಗೊಳಿಸಿ ಖಾಸಗಿ ಸಂಸ್ಥೆಗೆ ನಿರ್ವಹಣೆಯ ಜವಾಬ್ದಾರಿ ವಹಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪ.ಪಂ. ವ್ಯಾಪ್ತಿಯಲ್ಲಿನ ಕಾಮಗಾರಿಗಳಿಗೆ ಕ್ರಿಯಾಯೋಜನೆ ತಯಾರಿಸುವಾಗ ಸಂಪೂರ್ಣ ಕಾಮಗಾರಿಗೆ ಕ್ರಿಯಾಯೋಜನೆ ಮಾಡಬೇಕು. ಅರ್ಧ ಕಾಮಗಾರಿಗೆ ಎಸ್ಟಿಮೇಟ್ ತಯಾರಿಸಿರುವದರಿಂದ ಹಲವಷ್ಟು ಕಟ್ಟಡಗಳು ಪೂರ್ಣ ಗೊಳ್ಳದೇ ಹಾಗೆಯೇ ಉಳಿದಿವೆ. ಕಾಮಗಾರಿ ನಡೆಯುವಾಗ ಅಭಿಯಂತರರು ಸ್ಥಳದಲ್ಲಿದ್ದು ಪರಿಶೀಲನೆ ನಡೆಸಬೇಕು ಎಂದು ಉಪಾಧ್ಯಕ್ಷ ಸಂಜೀವ ಸೂಚಿಸಿದರು.

ಲಯನ್ಸ್ ಸಂಸ್ಥೆಯಿಂದ ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳನ್ನು ಸಂರಕ್ಷಿಸುವ ಶೀತಲೀಕರಣ ಘಟಕ ನೀಡಲಾಗಿದ್ದು, ಇದೀಗ ದಿನವೊಂದಕ್ಕೆ 5 ಸಾವಿರ ಬಾಡಿಗೆ ನಿಗದಿ ಪಡಿಸಿ ದ್ದಾರೆ. ಪ್ರಾರಂಭದಲ್ಲಿ ಸಾರ್ವಜನಿಕ ಸೇವೆ ಎಂದು ಹೇಳಿಕೊಂಡಿದ್ದವರು ಇದೀಗ ವ್ಯಾಪಾರಕ್ಕೆ ಮುಂದಾಗಿದ್ದಾರೆ ಎಂದು ಸದಸ್ಯರಾದ ಶರತ್, ಸೋಮೇಶ್, ಶೀಲಾ ಡಿಸೋಜ ಆರೋಪಿಸಿದರು.

ಸಭೆಯಲ್ಲಿ ಸದಸ್ಯರುಗಳಾದ ಪಿ.ಕೆ. ಚಂದ್ರು, ಜೀವನ್, ಜಯಂತಿ ಶಿವಕುಮಾರ್, ಶುಭಾಕರ್, ವೆಂಕಟೇಶ್ ಅವರುಗಳು ಭಾಗವಹಿಸಿದ್ದರು.