ಗೋಣಿಕೊಪ್ಪಲು, ಡಿ. 5: ದ.ಕೊಡಗಿನಲ್ಲಿ ಹುಲಿ ದಾಳಿಯು ಮುಂದುವರೆಯುತ್ತಿದ್ದು ರೈತರ ಜಾನು ವಾರುಗಳು ಹುಲಿಯ ಪಾಲಾಗುತ್ತಿವೆ. ಮುಂಜಾನೆ ವೇಳೆ 2.30ಕ್ಕೆ ಬೆಸಗೂರು ಗ್ರಾಮದ ಪೊನ್ನಿಮಾಡ ದೊರೆ ಗಣಪತಿಯವರ ಕೊಟ್ಟಿಗೆಯಲ್ಲಿದ್ದ ಹಸುವನ್ನು ಹುಲಿ ಕೊಂದು ಹಾಕಿದ್ದು ಈ ಭಾಗದ ರೈತರಲ್ಲಿ ಆತಂಕ ಮೂಡಿಸಿದೆ. ರಾತ್ರಿ 11 ಗಂಟೆ ಸುಮಾರಿಗೆ ಕೊಟ್ಟಿಗೆಯಲ್ಲಿ ಹಸು ಅರಚಿ ಕೊಳ್ಳುವುದನ್ನು ಕೇಳಿಸಿಕೊಂಡ ಮಾಲೀಕರು ಕೊಟ್ಟಿಗೆ ಬಳಿ ತೆರಳಿ ಪರಿಶೀಲನೆ ನಡೆಸಿದ್ದರು. ಹಸು ಗಾಬರಿಗೊಂಡಿರುವುದು ಕಂಡು ಸುತ್ತಲೂ ವೀಕ್ಷಣೆ ಮಾಡಿದಾಗ ಯಾವುದೇ ಪ್ರಾಣಿ ಕಂಡು ಬಂದಿರಲಿಲ್ಲ. ಮತ್ತೆ ಮಾಲೀಕರು ಮನೆಗೆ ತೆರಳಿದ್ದರು. ಹುಲಿಯು ನಂತರ ಕೊಟ್ಟಿಗೆಗೆ ಆಗಮಿಸಿ ಹಸುವನ್ನು ಕೊಂದು ಮಾಂಸವನ್ನು ತಿಂದು ತೆರಳಿದೆ. ಮುಂಜಾನೆ ಕೊಟ್ಟಿಗೆಗೆ ತೆರಳಿದ ಸಂದರ್ಭ ಹಸು ಮೃತಪಟ್ಟಿರುವುದು ಗೋಚರಿಸಿದೆ.ಸುದ್ದಿ ತಿಳಿದು ಪೊನ್ನಂಪೇಟೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ ಸರ್ಕಾರದ ನಿಯಮದಂತೆ ಪರಿಹಾರ ನೀಡುವ ಭರವಸೆ ನೀಡಿದರು. ಸ್ಥಳದಲ್ಲಿ ಗ್ರಾಮಸ್ಥರು ಹಾಜರಿದ್ದರು. ದ.ಕೊಡಗಿನಲ್ಲಿ ನಿರಂತರ ಹುಲಿ ದಾಳಿಯಿಂದ ರೈತರ ಜಾನುವಾರುಗಳು ಮೃತಪಡುತ್ತಿದ್ದರೂ ಇತ್ತ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಹುಲಿಯನ್ನು ಸೆರೆ ಹಿಡಿಯಲು ಯಾವುದೇ ಕ್ರಮ ವಹಿಸುತ್ತಿಲ್ಲ. ಅರಣ್ಯ ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿದ್ದರೂ ಹುಲಿ ಸೆರೆಗೆ ಮಾತ್ರ ಮುಂದಾಗುತ್ತಿಲ್ಲ. ಜಾನುವಾರುಗಳನ್ನೇ ನಂಬಿ ಜೀವನ ಸಾಗಿಸುತ್ತಿರುವ ಹಲವು ರೈತರಿಗೆ ತಮ್ಮ ಹಸುಗಳನ್ನು ಕಾಪಾಡಿಕೊಳ್ಳುವುದೇ ಯಕ್ಷಪ್ರಶ್ನೆ ಯಾಗಿದೆ. ಕೇವಲ ಹತ್ತು ಸಾವಿರ ಪರಿಹಾರ ಧನ ವಿತರಿಸಿ ತೆರಳುತ್ತಿರುವ ಅಧಿಕಾರಿಗಳು ರೈತರÀ ಕಷ್ಟದಲ್ಲಿ ಭಾಗಿಗಳಾಗುತ್ತಿಲ್ಲದ ಬಗ್ಗೆ ವ್ಯಾಪಕ ವಿರೋಧ ಕೇಳಿ ಬಂದಿದೆ.

ಮತ್ತೊಂದು ಪ್ರಕರಣದಲ್ಲಿ ಬಾಳೆಲೆ ಸಮೀಪದ ದೇವನೂರು ಗ್ರಾಮದ ಲಕ್ಷ್ಮಿಕಾಂತ್ ಎಂಬವರ ಎತ್ತು ಮುಂಜಾನೆ ವೇಳೆ ಹುಲಿ ದಾಳಿಗೆ ಬಲಿಯಾಗಿದೆ. ಈ ಬಗ್ಗೆ ಸ್ಥಳೀಯ ಅರಣ್ಯ ಇಲಾಖೆÉಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಿದರು. -ಹೆಚ್.ಕೆ. ಜಗದೀಶ್