*ಗೋಣಿಕೊಪ್ಪಲು, ಡಿ. 3: ಕೊರೊನಾ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಉಳಿದ ಅಂಗನವಾಡಿ ಮಕ್ಕಳನ್ನು ಕ್ರಿಯಾಶೀಲ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ ಮೈಸೂರಿನ ಪ್ರಥಮ ಟ್ರಸ್ಟ್ ವೇದಿಕೆ ಕಲ್ಪಿಸಿತ್ತು.

ಇಲ್ಲಿನ ತಿತಿಮತಿ ವರ್ತುಲದ ಹರಿಶ್ಚಂದ್ರಪುರ (1) ಅಂಗನವಾಡಿ ಕೇಂದ್ರದ ಸುಮಾರು 25 ಮಕ್ಕಳು ಇದರ ಸದುಪಯೋಗ ಪಡೆದುಕೊಂಡರು. ಅಂಗನವಾಡಿಯಲ್ಲಿ ಬೋಧಿಸುವ ವಿಷಯಗಳನ್ನು ವಿಂಗಡಿಸಿ ಝೂಮ್ ಆ್ಯಪ್ ಮೂಲಕ ಪಠ್ಯ ಹಾಗೂ ಆಟದ ಬಗ್ಗೆ ಬೋಧಿಸಲಾಯಿತು.

ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ 25 ಮಕ್ಕಳ ಸಂಖ್ಯೆಯನ್ನು ವಿಂಗಡಿಸಿ 4 ಮಕ್ಕಳನ್ನು ಒಂದು ಗುಂಪು ಮಾಡಿ 40 ನಿಮಿಷದಂತೆ ಝೂಮ್ ಆ್ಯಪ್‍ನ ಮೂಲಕ ಮಕ್ಕಳ ಕ್ರೀಯಾಶೀಲ ಚಟುವಟಿಕೆಯನ್ನು ನಡೆಸಲಾಯಿತು.

ಮಕ್ಕಳು ಛದ್ಮವೇಷದಲ್ಲಿ ಮಹಾತ್ಮಗಾಂಧಿ, ಭಾರತೀಯ ನಾರಿ, ಕೊಡವ ಉಡುಪು ಹಾಗೂ ರೂಪದರ್ಶಿಗಳ ವೇಷದಲ್ಲಿ ಕಾಣಿಸಿಕೊಂಡರು. ಹಾಡು, ಪದ್ಯ ಹೇಳುವುದು, ಮಗ್ಗಿ ಹೇಳುವುದು ಸೇರಿದಂತೆ ಹಲವು ಪಠ್ಯ ಕ್ರಮಗಳನ್ನು ತಿಳಿಸಲಾಯಿತು. ಅಲ್ಲದೇ ತರಕಾರಿ, ಪ್ರಾಣಿ, ಪಕ್ಷಿ ಹಾಗೂ ಬಣ್ಣಗಳ ಪರಿಚಯವನ್ನು ಮಕ್ಕಳಿಗೆ ಝೂಮ್ ಆ್ಯಪ್ ಮೂಲಕ ಕಲಿಸಲು ಪ್ರಥಮ ಟ್ರಸ್ಟ್ ಮುಂದಾಯಿತು.

ಹರಿಶ್ಚಂದ್ರಪುರದ ಅಂಗನವಾಡಿ ಶಿಕ್ಷಕಿ ಲತಾ, ಪ್ರಥಮ ಟ್ರಸ್ಟ್‍ನ ನಿರ್ದೇಶಕಿ ರಾಣಿ, ಝೂಮ್ ಆ್ಯಪ್‍ನ ಕಲಿಕಾ ಬೋಧನೆಗೆ ಮಕ್ಕಳಿಗೆ ಸಹಕರಿಸಿದರು.