ಕಣಿವೆ, ಡಿ. 2: ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಹಾರಂಗಿ ರಸ್ತೆಯಲ್ಲಿರುವ ಮೂಕಾಂಬಿಕಾ ಶಾಲೆಗೆ ಶಾಲೆಯ 1997ರ ಸಾಲಿನ ಹಳೆಯ ವಿದ್ಯಾರ್ಥಿಗಳು ಶಾಲೆಗೆ ಅಗತ್ಯವಿದ್ದ ಕೈತೊಳೆವ ಘಟಕಗಳನ್ನು ಕಟ್ಟಿಸಿ ಶಾಲೆಯ ಒಂದು ಭಾಗದ ಗೋಡೆಗೆ ಸುಣ್ಣ ಹೊಡೆಸಿಕೊಟ್ಟಿದ್ದಾರೆ.

ಹಳೆಯ ವಿದ್ಯಾರ್ಥಿನಿ ಬಿ.ಕೆ. ಹರಿಣಿ ನೇತೃತ್ವದಲ್ಲಿ ವ್ಯಾಟ್ಸಪ್ ಗ್ರೂಪ್‍ನಲ್ಲಿ ಚರ್ಚೆ ನಡೆಸಿದ ಸ್ನೇಹಿತರು ಕಲಿತ ಶಾಲೆಗೆ ಏನಾದರೊಂದು ಸಹಾಯ ಮಾಡುವ ಪಣತೊಟ್ಟರು. ಅದರಂತೆಯೇ ಶಾಲಾ ಇಂದಿನ ಮುಖ್ಯ ಶಿಕ್ಷಕರು ಹಾಗೂ ಅಂದಿನ ಶಿಕ್ಷಕರಾಗಿದ್ದ ಸೂದನ ಗೋಪಾಲ್ ಅವರನ್ನು ಸಂಪರ್ಕಿಸಿದರು.

ಶಾಲೆಯ ವಾತಾವರಣವನ್ನು ಒಮ್ಮೆ ನೋಡಿದ ಬಳಿಕ ಅತೀ ಅಗತ್ಯವಿದ್ದ ಕೈತೊಳೆವ ಕಟ್ಟೆಗಳನ್ನು ಕಟ್ಟಿಸಿದರು.

ತಳಕ್ಕೆ ಕಾಂಕ್ರಿಟ್ ಪಾದಚಾರಿ ಮಾರ್ಗ ಮತ್ತು ಗೋಡೆಗೆ ಸುಣ್ಣ ಹೊಡೆಸಿ ತಮ್ಮ ಸಾರ್ಥಕತೆ ಮೆರೆದರು.

ಹಳೆಯ ವಿದ್ಯಾರ್ಥಿಗಳ ಕೊಡುಗೆಯನ್ನು ಬುಧವಾರ ಶಾಲೆಗೆ ಆಗಮಿಸಿ ವೀಕ್ಷಿಸಿದ ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲೆಯ ಮುಖ್ಯ ಶಿಕ್ಷಕ ಸೂದನ ಗೋಪಾಲ್ ಮಾತನಾಡಿ, ಒಂದು ಶಾಲೆಯಲ್ಲಿ ವಿದ್ಯೆ ಕಲಿತ ಮಕ್ಕಳು ಮುಂದೆ ದೊಡ್ಡವರಾಗಿ ಉತ್ತಮ ಸಂಸ್ಕಾರಗಳೊಂದಿಗೆ ಕಲಿತ ಶಾಲೆಯನ್ನು ಮರೆಯದೇ ಏನಾದರೊಂದು ನೀಡಬೇಕೆಂಬ ನಿಲುವು ತಳೆಯುವುದು ಇದೆಯಲ್ಲಾ ಅದಕ್ಕಿಂತ ಮಿಗಿಲಾದುದು ಬೇರೇನು ಇಲ್ಲ ಎಂದು ಶ್ಲಾಘಿಸಿದರು.

1997ರ ಸಾಲಿನ ಹಳೆಯ ವಿದ್ಯಾರ್ಥಿಗಳ ಸಂಘದ ಸಂಚಾಲಕಿ ಬಿ.ಕೆ. ಹರಿಣಿ ಮಾತನಾಡಿ, ನಮಗೆ ಅಕ್ಷರದೊಂದಿಗೆ ಸಂಸ್ಕಾರಗಳನ್ನು ಕಲಿಸಿದ ಶಾಲೆಯನ್ನು ಮರೆಯಬಾರದೆಂಬ ಕಾರಣ ನಾವೆಲ್ಲರೂ ಸೇರಿ ಶಾಲೆಗೆ ಸಣ್ಣ ಸೇವೆ ಮಾಡಿದ್ದೇವೆ ಎಂದರು.

ಉಪನ್ಯಾಸಕಿ ಶ್ರೇಣಿ, ಮೂಕಾಂಬಿಕಾ ಪಿಯು ಕಾಲೇಜು ಉಪನ್ಯಾಸಕ ಚಂದನ್, ಶ್ರೇಣಿ, ಚಂದ್ರಶೇಖರ್, ಕಾಂತರಾಜು, ಶೈನಿ, ಸುರೇಶ್ ಮೊದಲಾದವರಿದ್ದರು. ಹಳೆಯ ವಿದ್ಯಾರ್ಥಿಗಳನ್ನು ಶಾಲೆಯ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ಈ ಸಂದರ್ಭ ಹಳೆಯ ವಿದ್ಯಾರ್ಥಿಗಳಾದ ಲತಾ, ಕುಸುಮ, ಮಧು, ಲೋಪಮುದ್ರಾ, ಮಂಜುನಾಥ, ಸಾನಿಫಾ, ಪ್ರಮೋದ್ ಮೊದಲಾದವರಿದ್ದರು.