ಕಣಿವೆ, ಡಿ. 2 : ಕೊಡಗು ಜಿಲ್ಲೆಯ ಪಶ್ಚಿಮೋತ್ತರ ದಿಕ್ಕಿನ ಅತ್ಯಂತ ಎತ್ತರದ, ಕಿಮೀ ಗಳುದ್ದಕ್ಕೂ ಸ್ವಾಭಾವಿಕವಾಗಿ ಪಸರಿಸಿರುವ ಗಿರಿ ಕಂದರಗಳ ಬೀಡು, ಭೂಮಿ ತಾಯಿಯೇ ಮೈವೆತ್ತು ಹಸಿರುಡುಗೆ ತೊಟ್ಟು ಕಂಗೊಳಿಸುವ ದೈವಸ್ವತ ಸೂರ್ಲಬ್ಬಿ ನಾಡು ನೋಡುಗರ ಕಣ್ಣಿಗೆ ರಸದೌತಣ ನೀಡುವ ಚೆಲುವ ಬೀಡು. ದೂರದ ಬೆಟ್ಟ ನುಣ್ಣಗೆ ಎಂಬ ಗಾಧೆಯಂತೆ, ಹೊರ ಪ್ರದೇಶಗಳಿಂದ ಇಲ್ಲಿಗೆ ಬಂದು ಈ ನಾಡಿನ ಚೆಲುವ ಸಿರಿ ನೋಡುಗರಿಗೇನೋ ಪರಮಾನಂದ. ಪ್ರಕೃತಿಯನ್ನು ಮರೆ ಮಾಚಿ ಬೆಳೆಯುವ ಮಹಾನಗರಗಳ ಜನರು ಇಲ್ಲಿಗೆ ಬಂದು ಇಲ್ಲಿನ ಸೌಂದರ್ಯವನ್ನು ಸವಿದಾಗ ಅಬ್ಬಾ ಅಬ್ಬಬ್ಬಾ.....! ಭೂಮಿ ತಾಯಿಯ ತವರು ಸ್ವರ್ಗದಲ್ಲಿ ವಾಸವಿರುವ ಈ ಜನರೆಷ್ಟು ಭಾಗ್ಯ ಶಾಲಿಗಳಪ್ಪ....! ಎಂದು ಅಲ್ಲಿ ಎಲ್ಲೆಲ್ಲೋ ಬೆಟ್ಟದ ಮೇಲೆ ದೂರದಿ ಕಾಣುವ ಒಂದೊಂದೇ ಮನೆಗಳತ್ತ ದೃಷ್ಟಿ ನೆಟ್ಟು ಅಲ್ಲಿನ ಜನರತ್ತ ಧನ್ಯತಾ ಭಾವ ತೋರುವುದು ಸಹಜ. ಆದರೆ, ಇಲ್ಲಿನ ಜನರು ಹಾಗೂ ಕೃಷಿಕರು (ಮೊದಲ ಪುಟದಿಂದ) ಅನುಭವಿಸುತ್ತಿರುವ ನರಕಯಾತನೆ ಮಾತ್ರ ಯಾರಿಗೂ ಗೋಚರಿಸದು. ಅಂದರೆ ವಾರ್ಷಿಕವಾಗಿ ಅತ್ಯಂತ ಹೆಚ್ಚು ಮಳೆ ಬೀಳುವ ಈ ಪ್ರದೇಶದಲ್ಲಿ ಯಾವುದೇ ಬೆಳೆ ಬೆಳೆಯ ಹೊರಟರೂ ಕೂಡ ಬೆಳೆವ ಬೆಳೆ ಯಾವುದೇ ರೈತರ ಕೈ ಸೇರುವುದಿಲ್ಲ.

ಇಲ್ಲಿ ಬೆಳೆವ ಕಾಫಿ ಗಿಡಗಳ ಮೇಲೆ ಸದಾ ಕಾಲ ಮಂಜು ಕವಿಯುವ ಕಾರಣದಿಂದ ಕಾಫಿ ಫಸಲು ಕೂಡ ಬರುತ್ತಿಲ್ಲ. ಇನ್ನು ಇಲ್ಲಿನ ಮತ್ತೊಂದು ಪ್ರಮುಖ ಬೆಳೆ ಏಲಕ್ಕಿ ಬೆಳೆಯ ಗತಿಯಲ್ಲೂ ಏರಿಕೆ ಕಾಣುತಿಲ್ಲ. ಬೆಟ್ಟ ಗುಡ್ಡಗಳ ಮೇಲಿಂದ ಹರಿದು ಬರುವ ಸ್ವಾಭಾವಿಕವಾದ ಜಲಮೂಲಗಳನ್ನು ಬಳಸಿಕೊಂಡು ಕಳೆದ ಹಲವು ವರ್ಷಗಳ ಹಿಂದೆ ಇಲ್ಲಿನ ಕೆಲವು ಕೃಷಿಕರು ಅಲ್ಪಾವಧಿಗೆ ಒಂದಷ್ಟು ಸೀಮಿತ ಆದಾಯ ತರಬಲ್ಲಂತಹ ತರಕಾರಿ ಕಾಯಿಪಲ್ಯೆಗಳನ್ನು ಬೆಳೆದು ಹತ್ತಿಪ್ಪತ್ತು ಕಿಮೀ ದೂರ ನಡೆದುಕೊಂಡೇ ತಲೆ ಮೇಲೆ ತರಕಾರಿ ಹೊತ್ತು ತಂದು ಮಾರಾಟ ಮಾಡುತ್ತಿದ್ದರು. ರಸ್ತೆಗಳು ಸುಧಾರಿಸದ ವಾಹನಗಳು ಸಂಚರಿಸದ ಸಂಪರ್ಕ ಸಂಚಾರ ಏನೂ ಇಲ್ಲದ ಸಮಯವದು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ ರಾಸಾಯನಿಕ ಔಷಧಿಗಳ ಯಥೇಚ್ಚವಾದ ಬಳಕೆ ತರಕಾರಿ ಕಾಯಿಪಲ್ಯೆಗಳ ಮೇಲೂ ದುಷ್ಪರಿಣಾಮ ಬೀರಿದ್ದರಿಂದ ಈಗ ತರಕಾರಿ ಬೆಳೆಯು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಕೃಷಿಕರು.

ಬದುಕು ಕಟ್ಟಲು ನಗರ ಸೇರಿದ ಯುವಕರು : ಸೂರ್ಲಬ್ಬಿ ವ್ಯಾಪ್ತಿಯ ಕಿಕ್ಕರಳ್ಳಿ, ಮಂಕ್ಯ, ಹಮ್ಮಿಯಾಲ, ಮುಟ್ಲು, ಗರ್ವಾಲೆ, ಬೆಟ್ಟದಕಾಡು, ಮೊದಲಾದ ಗ್ರಾಮಗಳಲ್ಲಿ ವಾಸವಿರುವ ಕುಟುಂಬಗಳ ನೂರಾರು ಮಂದಿ ಯುವಕರು ಕೃಷಿ ಕೈಕೊಟ್ಟ ಪರಿಣಾಮ ಜೀವನ ಸಾಗಿಸಲು ಮತ್ತು ಹೆತ್ತವರಿಗೆ ನೆರವಾಗಲು, ಪರ್ಯಾಯ ಜೀವನೋಪಾಯದ ಕನಸು ಹೊತ್ತು ದೂರದ ಮೈಸೂರು, ಮಂಗಳೂರು, ಬೆಂಗಳೂರು ಮತ್ತಿತರ ಕಡೆಗಳಿಗೆ ತೆರಳಿ ಅಲ್ಲಿನ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ. ಮತ್ತೆ ಕೆಲವರು ವಿಧಿ ಇಲ್ಲದೇ ಮತ್ತು ಒಲ್ಲದ ಮನಸ್ಸಿನಲ್ಲಿ ಊರು ತೊರೆದು ಪೆÇೀಷಕರಿಗೆ ನೆರವಾದವರಿದ್ದಾರೆ. ಅಂದರೆ ಆರ್ಥಿಕವಾಗಿ ಸಬಲರಾದವರು ತಮ್ಮ ಪೆÇೀಷಕರನ್ನು ಮಡಿಕೇರಿ, ಮಾದಾಪುರಗಳಲ್ಲಿ ಬಾಡಿಗೆ ಮನೆಗಳಲ್ಲಿಟ್ಟು ನೋಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಅಪ್ಪ ಹಾಕಿದ ಆಲಮರಕ್ಕೆ ಜೋತು ಬಿದ್ದು ತೋಟ ಹಾಗೂ ಮನೆಯ ಮೇಲಿನ ಭಾವನಾತ್ಮಕ ಸಂಬಂಧವನ್ನು ಕಳಚಲಾರದೇ ಅಲ್ಲೇ ವಾಸವಿರುವವರು ಇದ್ದಾರೆ. ಮಾಹಿತಿಯೊಂದರ ಪ್ರಕಾರ ಇಲ್ಲಿನ ಬಹುತೇಕ ಯುವಕರು ಪ್ರತೀ ಮನೆಗೆ ಒಬ್ಬರು ಇಬ್ಬರಂತೆ ಊರು ತೊರೆದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನಲಾಗಿದೆ. ಈಗ ಈ ಗ್ರಾಮಗಳಲ್ಲಿ ಕೇವಲ ವಯೋವೃದ್ಧ ಪೆÇೀಷಕರು ಹಿರಿಯ ಜೀವಗಳೇ ಕಾಣಸಿಗುತ್ತಾರೆ ಹೊರತು ಯುವಕರ ಸಂಖ್ಯೆ ತೀರಾ ವಿರಳ. ಬಹಳಷ್ಟು ವರ್ಷಗಳ ಹಿಂದೆ ಸೂರ್ಲಬ್ಬಿ ನಾಡು ತೊರೆದು ಜೀವನೋಪಾಯಕ್ಕಾಗಿ ನಗರ ಸೇರಿದ್ದವರು.

ಕಳೆದ ಐದಾರು ತಿಂಗಳಿಂದ ಕೊರೊನಾ ಕಾರಣದಿಂದ ಹಳ್ಳಿಗಳತ್ತ ಮುಖ ಮಾಡಿ ಪೆÇೀಷಕರ ಜೊತೆ ಇರುವಂತಾಗಿದೆ. ಆದರೆ ಇವರಿಗೆ ಇತ್ತ ಇಲ್ಲಿನ ಹವಾಮಾನದ ವೈಪರೀತ್ಯ ಕೃಷಿ ಮಾಡೋಕು ಬಿಡುತ್ತಿಲ್ಲ. ಅತ್ತ ನಗರಕ್ಕೂ ಹೋಗದ ಸಂಧಿಗ್ಧ ಸ್ಥಿತಿಯಲ್ಲಿ ದಿನಗಳನ್ನು ಕಳೆಯುವಂತಾಗಿದೆ. ಈ ಸೂರ್ಲಬ್ಬಿ ನಾಡಿನ ಬಹುತೇಕ ಮಕ್ಕಳು ತಮ್ಮ ಅಪ್ಪ ಅಮ್ಮಂದಿರ ಬಳಿ ನಗರ ಪಟ್ಟಣಗಳನ್ನು ಸೇರಿರುವುದರಿಂದ ಅಲ್ಲಿಯೇ ಶಿಕ್ಷಣ ಕಲಿಯುವವರು ಇದ್ದಾರೆ. ಇನ್ನು ನಗರಗಳಲ್ಲಿ ಉದ್ಯೋಗ ಮಾಡಿಕೊಂಡು ಮಡಿಕೇರಿ, ಕುಶಾಲನಗರ, ಮಾದಾಪುರ, ಸುಂಟಿಕೊಪ್ಪ ಮೊದಲಾದೆಡೆಗಳ ಖಾಸಗಿ ಶಾಲೆಗಳಲ್ಲಿ ಬಾಡಿಗೆ ಮನೆಗಳಲ್ಲಿ ಪೆÇೀಷಕರನ್ನು ಇಟ್ಟು ಮಕ್ಕಳನ್ನು ಓದಿಸುವ ಯುವಕರೂ ಇದ್ದಾರೆ. ಹಾಗಾಗಿ ಸೂರ್ಲಬ್ಬಿ ಗ್ರಾಮದಲ್ಲಿರುವ ಶತಮಾನ ಕಂಡ ಸರ್ಕಾರಿ ಶಾಲೆಗೆ ಇದೀಗ ಹೆತ್ತವರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನೇ ಸೇರಿಸದ ಕಾರಣ ಈಗ ಆ ಶಾಲೆ ಮಕ್ಕಳನ್ನು ಕಾಣದೇ ಅನಾಥವಾಗಿದೆ. ಕಳೆದ ವರ್ಷ ಹತ್ತನೇ ತರಗತಿಯಲ್ಲಿ ಕೇವಲ ಇಬ್ಬರು ಮಾತ್ರ ವಿದ್ಯಾರ್ಥಿಗಳಿದ್ದರೆ, ಈ ಶೈಕ್ಷಣಿಕ ಸಾಲಿನಲ್ಲಿ ಮತ್ತೆ ಕೇವಲ ಮೂವರು ವಿದ್ಯಾರ್ಥಿಗಳು ಮಾತ್ರ ಇರುವುದನ್ನು ಇಲ್ಲಿ ಸ್ಮರಿಸಬಹುದು. ಇನ್ನು ಗರ್ವಾಲೆ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಎರಡೂ ಕೂಡ ಬಾಗಿಲು ಮುಚ್ಚಿ ವರುಷಗಳೇ ಕಳೆದಿವೆ. ಆರ್ಥಿಕವಾಗಿ ಹಿಂದುಳಿದರೂ ಕೂಡ ಬಹುತೇಕ ಕೊಡವ ಕುಟುಂಬಗಳು ಇರುವ ಈ ಸೂರ್ಲಬ್ಬಿ ನಾಡಿನಲ್ಲಿ ಸಮುದಾಯದ ಮೂಲ ಸಂಸ್ಕøತಿ, ಆಚಾರ - ವಿಚಾರಗಳನ್ನು ಆಚರಿಸಿಕೊಂಡು ಉಳಿಸಿ ಸಂರಕ್ಷಿಸಿಕೊಂಡು ಬರುತ್ತಿರುವುದು ಇಲ್ಲಿನ ಮತ್ತೊಂದು ವಿಶೇಷ. -ವರದಿ ಕೆ.ಎಸ್.ಮೂರ್ತಿ