ಕುಶಾಲನಗರ, ಡಿ.2 : ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ವ್ಯಾಪಕ ಭೂಕಬಳಿಕೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದರೂ ಸ್ಥಳೀಯ ಆಡಳಿತ ಮೌನ ವಹಿಸಿರುವುದರ ಹಿಂದೆ ದೊಡ್ಡ ಭೂ ಮಾಫಿಯಾ ದಂಧೆ ಕಾರ್ಯ ನಿರ್ವಹಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ವಿ.ಪಿ. ಶಶಿಧರ್ ಆರೋಪಿಸಿದ್ದಾರೆ.

ಕುಶಾಲನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿ ಶೀಘ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ಕುಶಾಲನಗರದಲ್ಲಿ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಕೆಲವು ಏಜೆಂಟರು ಅಕ್ರಮವಾಗಿ ಭೂಮಿ ಪರಭಾರೆ ಮಾಡುವ, ಮಾಲೀಕತ್ವ ಹಕ್ಕು ಬದಲಾವಣೆ ದಂಧೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಣ್ಣ ಮುಂದೆಯೇ ಹಲವು ಪ್ರಕರಣಗಳು ಜೀವಂತವಾಗಿದ್ದರೂ ಕೂಡ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ ಎಂದು ಶಶಿಧರ್ ಆರೋಪಿಸಿದರು.

ಸ್ಥಳೀಯ ಆಡಳಿತಕ್ಕೆ ಚುನಾವಣೆ ನಡೆದು 2 ವರ್ಷ ಜನಪ್ರತಿನಿಧಿಗಳಿಗೆ ಅಧಿಕಾರ ಸಿಗದಿರುವುದು ಅಧಿಕಾರಿಗಳಿಗೆ ಅನುಕೂಲವಾಗಿತ್ತು. ಪಟ್ಟಣ ವ್ಯಾಪ್ತಿಯಲ್ಲಿ ಹಲವು ಅನಧಿಕೃತ ಬಡಾವಣೆಗಳ ನಿರ್ಮಾಣ ಆಡಳಿತಾಧಿಕಾರಿಗಳ ಅವಧಿಯಲ್ಲಿ ನಡೆದಿರುವುದು ದುರಂತ. ಬಿಜೆಪಿ ನೇತೃತ್ವದ ಪಂಚಾಯ್ತಿ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಮೇಲೆ ಸಾರ್ವಜನಿಕರಿಗೆ ತುಂಬಾ ವಿಶ್ವಾಸವಿದೆ. ಡಿ.2 ರಂದು ನಡೆಯುವ ಆಡಳಿತ ಮಂಡಳಿಯ ಮೊದಲ ಸಭೆಯಲ್ಲಿ ಈ ಪ್ರಕರಣಗಳ ಬಗ್ಗೆ ಕೈಗೊಳ್ಳುವ ತೀರ್ಮಾನವನ್ನು ನೋಡಿ ನಾವು ನಮ್ಮ ಮುಂದಿನ ಹೆಜ್ಜೆಯ ಬಗ್ಗೆ ನಿರ್ಧರಿಸುತ್ತೇವೆ ಎಂದು ತಿಳಿಸಿದರು.

ಕ್ಯಾರಾವನ್ ಲೇಔಟ್ ಬಗ್ಗೆ ಎಷ್ಟೇ ಪ್ರತಿಭಟನೆ ಮಾಡಿದರು ಅಧಿಕಾರಿಗಳ ಜಾಣ್ಮೆಯಿಂದ ಲೇಔಟ್ ಕಾಮಗಾರಿ ಸ್ಥಗಿತಗೊಂಡಿಲ್ಲ. ಕುಶಾಲನಗರ ಮುಖ್ಯಾಧಿಕಾರಿ ಸುಜಯ್ ಕುಮಾರ್ ಕೂಗುಮಾರಿ ರೀತಿಯಲ್ಲಿ ಜನರಿಗೆ ನಾಳೆ ಬಾ ಎನ್ನುವ ಸಿದ್ದ ಉತ್ತರವನ್ನು ನೀಡಿ ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ಆರೋಪಿಸಿದರು. ಜಿಲ್ಲಾಧಿಕಾರಿಗಳು ತಕ್ಷಣವೇ ಕುಶಾಲನಗರಕ್ಕೆ ಆಗಮಿಸಿ ಹೋರಾಟಗಾರರ ಮತ್ತು ಸಾರ್ವಜನಿಕರ ಅಹವಾಲು ಸ್ವೀಕರಿಸಬೇಕೆಂದು ಒತ್ತಾಯಿಸಿದರು.

ಖಾಸಗಿ ಸಂಸ್ಥೆಯ ಲೇಔಟ್ ನಲ್ಲಿ 5 ಅಡಿಗೂ ಅಧಿಕ ಎತ್ತರಕ್ಕೆ ಮಣ್ಣು ಸುರಿಯುತ್ತಿರುವುದರಿಂದ ಅಕ್ಕಪಕ್ಕದ ಬಡಾವಣೆಗಳಿಗೆ ಕಾವೇರಿ ಪ್ರವಾಹ ಹರಿದು ಜನ ಸಂಕಷ್ಟಕ್ಕೆ ಈಡಾಗುವು ದರಲ್ಲಿ ಯಾವುದೇ ಅನುಮಾನವಿಲ್ಲ. ನಂತರ ಅವರಿಗೆ ಜನ ಕಟ್ಟುವ ತೆರಿಗೆ ಹಣದಿಂದ ಪರಿಹಾರ ನೀಡುವ ಬದಲು ಆ ಸಂಸ್ಥೆಗೆ ತಕ್ಷಣವೇ ಕೆಲಸ ಸ್ಥಗಿತಗೊಳಿಸಲು ಸೂಚಿಸಬೇಕು ಎಂದರು.

ಬಹುತೇಕ ಖಾಸಗಿ ಬಡಾವಣೆ ಗಳಲ್ಲಿ ಇರುವ ಪಾರ್ಕ್ ಮತ್ತು ಸಿಎ ಸೈಟ್‍ಗಳನ್ನು ಮೀಸಲಿಡದ ಬಡಾವಣೆ ಮಾಲೀಕÀರಿಂದ ವಶಪಡಿಸಿಕೊಂಡು ಸಾರ್ವಜನಿಕರಿಗೆ ಬಳಕೆಗೆ ಮೀಸಲಿಡಬೇಕೆಂದು ಒತ್ತಾಯಿಸಿದರು. ಗುಂಡೂರಾವ್ ಬಡಾವಣೆಯಲ್ಲಿ ಸಂಚಾರಿ ಪೆÇಲೀಸ್ ಠಾಣೆ ಮಾಡಲು ಹೊರಟಿರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತರಲಾಗಿದೆ. ಅದೇ ನಿವೇಶನದಲ್ಲಿ ಪಟ್ಟಣ್ಣ ಪಂಚಾಯಿತಿಯ ಶಾಖಾ ಕಚೇರಿ ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ವಿ.ಎಸ್. ಅನಂದಕುಮಾರ್, ಶೇಖ್ ಖಲೀಮುಲ್ಲ, ಕುಶಾಲನಗರ ತಾಲೂಕು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಈ.ಕೆ. ಕರೀಂ, ಡಿಕೆಶಿ ಅಭಿಮಾನಿ ಬಳಗದ ಅಧ್ಯಕ್ಷ ವಿ.ಜೆ.ನವೀನ್ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷ ಡಿ.ಪುನೀತ್ ಇದ್ದರು.