ಕೂಡಿಗೆ, ಡಿ. 2: ಸೋಮವಾರಪೇಟೆ ಬಾಣಾವರದ ಕಡೆಯಿಂದ ಬರುತ್ತಿದ್ದ ವ್ಯಾಗನರ್ ಕಾರು ಹಾಸನ ಹೆದ್ದಾರಿ ಹೆಬ್ಬಾಲೆ ಸಮೀಪದ ಕೆನರಾ ಬ್ಯಾಂಕ್ ಮುಂಭಾಗ ನಿಲ್ಲಿಸಿದ್ದ ಮೂರು ಬೈಕ್‍ಗಳಿಗೆ ಡಿಕ್ಕಿ ಹೊಡೆದು ಕೆನರಾ ಬ್ಯಾಂಕ್‍ನ ಕೆಳ ಭಾಗದ ಅಂಗಡಿ ಮಳಿಗೆಗೆ ಅಪ್ಪಳಿಸಿ ನಿಂತ ಘಟನೆ ನಡೆದಿದೆ.ಕುಶಾಲನಗರದ ಸರ್ವೆ ಇಲಾಖೆಯ ಅಧಿಕಾರಿ ರಾಜಾಚಾರಿ ಎಂಬವರು ತಮ್ಮ ಕಾರಿನಲ್ಲಿ ಕರ್ತವ್ಯ ಮುಗಿಸಿಕೊಂಡು ಬಾಣಾವರ ರಸ್ತೆಯ ಮೂಲಕ ಹೆಬ್ಬಾಲೆಯ ಹಾಸನ ಹೆದ್ದಾರಿ ಸಮೀಪಿಸುವ ಸಂದರ್ಭ ಕಾರು ನಿಯಂತ್ರಣ ತಪ್ಪಿ ಹೆಬ್ಬಾಲೆ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಕೆನರಾ ಬ್ಯಾಂಕ್‍ನ ಮುಂಭಾಗದಲ್ಲಿ ಬ್ಯಾಂಕ್ ವ್ಯವಹಾರಕ್ಕೆ ಬಂದಿದ್ದ 3 ಗ್ರಾಹಕರ ಬೈಕ್‍ಗಳಿಗೆ ನಿಯಂತ್ರಣ ಸಿಗದೆ ಡಿಕ್ಕಿ ಹೊಡೆದು ನಂತರ ಬ್ಯಾಂಕ್‍ನ ಕೆಳ ಭಾಗದ ಅಂಗಡಿ ಮಳಿಗೆಗೆ ಅಪ್ಪಳಿಸಿದೆ. ಸ್ಥಳದಲ್ಲಿ ಜನರಿಲ್ಲದ್ದರಿಂದ ಅನಾಹುತ ತಪ್ಪಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.