ವೀರಾಜಪೇಟೆ, ಡಿ. 1: ವೀರಾಜಪೇಟೆ ಬಳಿಯ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತರ್ಮೆಕಾಡು ಪೈಸಾರಿಯಲ್ಲಿ ಹೆಚ್.ಪಿ. ಪೂಜಾ (20) ಎಂಬ ಯುವತಿಯ ಜಾತಿ ನಿಂದನೆ ಮಾಡಿ ಇತರ ನಿವಾಸಗಳ ಮೇಲೆಯೂ ದೌರ್ಜನ್ಯ ಎಸಗಿದ ಆರೋಪದಡಿ ಹೇಮಂತ್, ವಿವೇಕ್‍ರೈ, ಪೆರುಂಬಾಡಿಯ ರತೀಶ್ ಹಾಗೂ ಬಾಳುಗೋಡು ಗ್ರಾಮದ ಜೀವನ್ ಎಂಬ ನಾಲ್ವರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವೆಂಬರ್ 24 ರಂದು ತಾಲೂಕು ಆಡಳಿತ ಆರ್ಜಿ ಗ್ರಾಮ ಪಂಚಾಯಿತಿಯ ತರ್ಮೆಕಾಡು ಗೋಮಾಳ ಪೈಸಾರಿಯ ಸುಮಾರು 15.12 ಎಕರೆ ಜಾಗಕ್ಕೆ ಬೇಲಿ ಹಾಕಿ ಹಿಂತಿರುಗಿದ ನಂತರ ಸಂಜೆ 5.30 ರ ಸಮಯದಲ್ಲಿ ಈ 4 ಮಂದಿ ಸಂಘಟನೆಯ ಹೆಸರಿನಲ್ಲಿ ಯುವತಿಯ ಮೇಲೆ ಜಾತಿ ನಿಂದನೆ ಮಾಡಿ ಗುಡಿಸಿಲಿನ ಮೇಲಿನ ಹೊದಿಕೆಯ ಪ್ಲಾಸ್ಟಿಕ್ ಹರಿದು ದೌರ್ಜನ್ಯ ಎಸಗುವುದರೊಂದಿಗೆ ಇತರ ನಿವಾಸಗಳ ಮೇಲೂ ದೌರ್ಜನ್ಯ ನಡೆಸಿದ್ದರೆಂಬ ದೂರಿನ ಮೇರೆ ನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.