ಶ್ರೀಮಂಗಲ, ಡಿ. 1: ರಾಜ್ಯವು ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದು, ವಿದ್ಯುತ್ಗಾಗಿ ಬೇರೆ ರಾಜ್ಯವನ್ನು ಅವಲಂಭಿಸುವ ಅಗತ್ಯತೆ ಈಗ ಇಲ್ಲ. ಗಾಳಿಯಂತ್ರದ ಮೂಲಕ 500 ಮೆಗಾವ್ಯಾಟ್ ಮತ್ತು ಸೌರಶಕ್ತಿ ಮೂಲಕ 7500 ಮೆಗಾವ್ಯಾಟ್ ಅಲ್ಲದೆ ಬಯೋಮಾಸ್ಕ್ ಮತ್ತು ಥರ್ಮಲ್ನಿಂದಲೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ರಾಜ್ಯ ವಿದ್ಯುತ್ ಪರಿವೀಕ್ಷಣಾ ಇಲಾಖೆಯ ಮುಖ್ಯಸ್ಥ ತೀತಿರ ಎನ್. ರೋಶನ್ ಅಪ್ಪಚ್ಚು ಹೇಳಿದರು.
ಹುದಿಕೇರಿಯ ಮಲೆನಾಡು ಸ್ಪೋಟ್ಸ್ ಕ್ಲಬ್ನಲ್ಲಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇತರ ಜಿಲ್ಲೆಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ವಿದ್ಯುತ್ ಮಾರ್ಗದಲ್ಲಿ ಉಂಟಾಗುತ್ತಿರುವ ಲೋಪದೋಷ ವಿತರಣೆಯಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಗಳಿಂದ ಇನ್ನೊಂದೆಡೆ ಬೇಡಿಕೆಗೆ ಪೂರಕವಾಗಿ ಮಾರ್ಗ ಮೇಲ್ದರ್ಜೆಗೆ ಏರದಿರುವುದರಿಂದ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ ಎಂದು ಹೇಳಿದರು.
ಕೊಡಗು ಜಿಲ್ಲೆಯಲ್ಲಿ ಲೈನ್ಮ್ಯಾನ್ಗಳ ಕೊರತೆ ಇದೆ. ಸ್ಥಳೀಯರು ಲೈನ್ಮ್ಯಾನ್ ಕೆಲಸಕ್ಕೆ ಆಸಕ್ತಿ ತೋರುತ್ತಿಲ್ಲ. ಉತ್ತರ ಕರ್ನಾಟಕ ಹಾಗೂ ಹೊರಜಿಲ್ಲೆಯ ಲೈನ್ ಮ್ಯಾನ್ಗಳು ಕೊಡಗು ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಿರುವುದರಿಂದ ಲೈನ್ಮ್ಯಾನ್ಗಳ ಹುದ್ದೆ ಖಾಲಿಯಾಗಿವೆ. ಇದರಿಂದ ಗ್ರಾಹಕರ ಸಮಸ್ಯೆಗೆ ತಕ್ಷಣ ಸ್ಪಂದಿಸಲು ತೊಂದರೆಯಾಗುತ್ತಿದೆ ಎಂದು ಹೇಳಿದರು.
ಪೊನ್ನಂಪೇಟೆಯಿಂದ ಶ್ರೀಮಂಗಲ ಮಾರ್ಗ ಪ್ರಸ್ತುತ 33 ಕೆವಿ ಇರುವುದನ್ನು 66 ಕೆವಿ ಸಾಮಥ್ರ್ಯಕ್ಕೆ ಏರಿಸುವ ಟೆಂಡರ್ಗೆ ಗುತ್ತಿಗೆದಾರರು ನಿರಾಸಕ್ತಿ ತಾಳಿದ ಹಿನ್ನೆಲೆ ಕಾಮಗಾರಿ ಮೊತ್ತವನ್ನು ಶೇ. 30ರಷ್ಟು ಹೆಚ್ಚುವರಿಗೊಳಿಸಿ ಮರು ಟೆಂಡರ್ ಕರೆಯಲಾಗಿದೆ. ಇದನ್ನು ಮೈಸೂರಿನ ಗುತ್ತಿಗೆದಾರರು ಟೆಂಡರ್ ಪಡೆದಿದ್ದು, ಸದ್ಯದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.
ಪೊನ್ನಂಪೇಟೆ ಮತ್ತು ಶ್ರೀಮಂಗಲದ ನಡುವೆ ಹುದಿಕೇರಿ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದ್ದು, ಇಲ್ಲಿ ಸಬ್ಸ್ಟೇಶನ್ ನಿರ್ಮಿಸಲು 2 ಎಕರೆ ಜಾಗದ ಅಗತ್ಯವಿದೆ. ಸರಕಾರದ ಜಾಗ ಇದ್ದರೆ ಒಳ್ಳೆಯದು. ಇಲ್ಲದಿದ್ದರೆ ಖಾಸಗಿಯವರು ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ವಿಧಿಸುವ ಸರಕಾರಿ ಭೂಮೌಲ್ಯಕ್ಕೆ ತಕ್ಕಂತೆ ಜಾಗ ನೀಡಿದರೆ ಕಾಮಗಾರಿ ನಿರ್ಮಿಸಲು ಅವಕಾಶವಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಲೆನಾಡು ಸ್ಪೋಟ್ಸ್ ಕ್ಲಬ್ನ ಅಧ್ಯಕ್ಷ ಮಿದೇರಿರ ನವೀನ್ ಮನುಷ್ಯನಿಗೆ ಗುರಿ ಇರಬೇಕು. ರೋಶನ್ಅಪ್ಪಚ್ಚು ಅವರು ಪ್ರಾಧ್ಯಾಪಕರಾಗಿದ್ದರೂ ಅಷ್ಟಕ್ಕೆ ತೃಪ್ತಿ ಪಡದೆ ಉನ್ನತ ಸ್ಥಾನಮಾನಕ್ಕೆ ಏರಲು ಶ್ರಮಿಸಿದ ಕಾರಣ ಹಂತಹಂತವಾಗಿ ಉನ್ನತ ಸ್ಥಾನಮಾನ ಪಡೆಯಲು ಕಾರಣವಾಯಿತು. ಇದು ಎಲ್ಲರಿಗೂ ಮಾದರಿ ಎಂದು ಹೇಳಿದರು.
ಈ ಸಂದರ್ಭ ವೇದಿಕೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಕೊಡಂಗಡ ಬಿದ್ದಪ್ಪ, ಚಂಗುಲಂಡ ದೇವಯ್ಯ, ಚೆಕ್ಕೆರ ಅಜಿತ್, ಚಿಮ್ಮುಣಿರ ಸೋಮಯ್ಯ, ಚಕ್ಕೆರ ಚಂದ್ರಪ್ರಕಾಶ್, ವಾಸುರಾಜ್ ಮತ್ತು ಸಂಘದ ಸದಸ್ಯರು ಪಾಲ್ಗೊಂಡಿದ್ದರು.