ಸೋಮವಾರಪೇಟೆ, ಡಿ. 1: ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ತೋಳೂರು ಗ್ರಾಮದಲ್ಲಿ ನೂತನವಾಗಿ ಜೀರ್ಣೋದ್ಧಾರ ಗೊಂಡಿರುವ ಶ್ರೀ ಬಸವೇಶ್ವರ ದೇವಾಲಯದ ಲೋಕಾರ್ಪಣಾ ಕಾರ್ಯಕ್ರಮ ತಾ. 2 ಮತ್ತು 3 ರಂದು ನಡೆಯಲಿದೆ.

ತಾ.2ರಂದು (ಇಂದು) ಈಶ್ವರ,ಬಸವೇಶ್ವರ, ಗಣಪತಿ,ನಾಗದೇವತೆಯ ವಿಗ್ರಹ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನ ಪ್ರಾರಂಭೋತ್ಸವ ನಡೆಯಲಿದ್ದು, ಸಂಜೆ 5 ಗಂಟೆಗೆ ವೇದಬ್ರಹ್ಮ ಯು.ಆರ್.ಶೇಷಾಚಲ ಅವರ ನೇತೃತ್ವದಲ್ಲಿ ಗಣಪತಿ ಪೂಜೆ, ದೀಪಾರಾಧನೆ, ಗ್ರಾಮಸ್ಥರಿಂದ ಪ್ರಾರ್ಥನೆ, ಮಹಾಸಂಕಲ್ಪ, ದೇವನಾಂದಿ, ಕಳಸ ಸ್ಥಾಪನೆ, ವೇದಪಾರಾಯಣ, ವಾಸ್ತು ಪೂಜೆ, ವಾಸ್ತು ಬಲಿ, ಮಹಾಪೂಜೆ, ಮಂಗಳಾರತಿ ನೆರವೇರಲಿದೆ.

ತಾ.3ರ ಬೆಳಗ್ಗೆ 6 ಗಂಟೆಗೆ ಗಂಗೆಪೂಜೆ, ಗಣಪೂಜೆ, ಕುಂಭ ಮೆರವಣಿಗೆ, ಗಣಪತಿ ಹೋಮ, ಮೃತ್ಯುಂಜಯ ಹೋಮ, ನವಗ್ರಹ ಹೋಮ, ಮಹಾಬಲಿ, 12 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ. ಅನೇಕ ದಶಕಗಳ ಹಿಂದೆ ನಿರ್ಮಾಣಗೊಂಡಿದ್ದ ದೇವಾಲಯ ಶಿಥಿಲಾವಸ್ಥೆಗೆ ತಲುಪಿದ್ದರಿಂದ, ಸುಮಾರು 25 ಲಕ್ಷ ವೆಚ್ಚದಲ್ಲಿ ನೂತನವಾಗಿ ದೇವಾಲಯವನ್ನು ನಿರ್ಮಿಸಲಾಗಿದೆ.