ಕುಶಾಲನಗರ, ನ. 28: ರಂಜಿತ್ ಫ್ರೆಂಡ್ಸ್ ಅಟಾಕರ್ಸ್ ಹಾಗೂ ಅಂಬೇಡ್ಕರ್ ಜನಪರ ವೇದಿಕೆ ಆಶ್ರಯದಲ್ಲಿ ಪ್ರಥಮ ವರ್ಷದ ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯಾಟಕ್ಕೆ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಾಲನೆ ನೀಡಲಾಯಿತು. ಎರಡು ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಯನ್ನು ಪಟ್ಟಣ ಪಂಚಾಯತಿ ಅಧ್ಯಕ್ಷ ಜಯವರ್ಧನ್ ಉದ್ಘಾಟಿಸಿದರು.

ಆಟಗಾರರು ಶ್ರದ್ಧೆಯಿಂದ ಆಡುವ ಮೂಲಕ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು. ಆಟದಲ್ಲಿ ಸೋಲು-ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮೂಲಕ ಉತ್ತಮ ಆಟಗಾರನಾಗಿ ಹೊರ ಹೊಮ್ಮಬೇಕು ಎಂದು ಜಯವರ್ಧನ್ ಹೇಳಿದರು.

ಕಾಂಗ್ರೆಸ್ ಮುಖಂಡ ವಿ.ಪಿ. ಶಶಿಧರ್ ಮಾತನಾಡಿ, ಕ್ರೀಡಾಕೂಟಗಳು ಜಾತಿ-ಧರ್ಮವನ್ನು ಬದಿಗಿಟ್ಟು ಎಲ್ಲರೂ ಒಗ್ಗೂಡಿ ಸೇರುವ ವೇದಿಕೆಯಾಗಿದೆ. ಹೆಚ್ಚು ಕ್ರೀಡಾಕೂಟಗಳನ್ನು ನಡೆಸುವ ಮೂಲಕ ಸಂಘಟನೆಗಳು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ, ಪಟ್ಟಣ ಪಂಚಾಯಿತಿ ಸದಸ್ಯರಾದ ವಿ.ಎಸ್. ಆನಂದ್‍ಕುಮಾರ್, ಜಗದೀಶ್, ಸುರೇಶ್, ನಾಮನಿರ್ದೇಶಿತ ಸದಸ್ಯ ಮನು, ಬಿಜೆಪಿ ನಗರ ಅಧ್ಯಕ್ಷ ಉಮಾಶಂಕರ್, ಅಂಬೇಡ್ಕರ್ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಸಿ. ಜಯಪ್ರಕಾಶ್. ಜಿಲ್ಲಾ ಕಾರ್ಯದರ್ಶಿ ಆಬಿದ್ ಮತ್ತಿತರರು ಇದ್ದರು.