ವೀರಾಜಪೇಟೆ, ನ. 28: ಜೆ.ಸಿ.ಟಿ.ಯು ಕಾರ್ಮಿಕ ಸಂಘಟನೆಯ ವತಿಯಿಂದ ಇಂದು ತಾಲೂಕು ಕಚೇರಿ ಮುಂದೆ ಸಂಘಟನೆಯ ಕಾರ್ಯದರ್ಶಿ ಎ.ಸಿ. ಸಾಬು ನೇತೃತ್ವದಲ್ಲಿ ಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಮುಷ್ಕರ ನಿರತ ಕಾರ್ಮಿಕರು ಗಳನ್ನುದ್ದೇಶಿಸಿ ಮಾತನಾಡಿದ ಸಾಬು ಅವರು, ಕೇಂದ್ರ ಸರಕಾರ ಕಾರ್ಮಿಕರನ್ನು ಗುಲಾಮರನ್ನಾಗಿ ಮಾಡಿದೆ. ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷತೆ ಒದಗಿಸುತ್ತಿಲ್ಲ. ಕೇಂದ್ರ ಸರಕಾರ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಕಾರ್ಪೋರೇಟ್ ಕಂಪೆನಿಗಳ ಪರವಾಗಿ ಸರಕಾರ ನಿಂತಿದೆ. ಎಪಿಎಂಸಿ ಮತ್ತು ಭೂಸ್ವಾಧೀನ ಕಾಯ್ದೆಗಳಿಗೆ ತಿದ್ದಿಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿದೆ. ಕೂಡಲೇ ರೈತ ವಿರೋಧಿ ಕಾನೂನನ್ನು ವಾಪಾಸು ಪಡೆಯ ಬೇಕು. ಕೊರೊನಾ ಸಂಕಷ್ಟದಲ್ಲಿರುವ ಸಮಯದಲ್ಲಿ ಅಸಂಘಟಿತ ಕ್ಷೇತ್ರದ ಕಾರ್ಮಿಕರು, ಸೇವಾ ವಲಯದಲ್ಲಿ ದುಡಿಯುವ ನೌಕರರು, ಕೃಷಿ ಕೂಲಿ ಕಾರ್ಮಿಕರು, ಬಡ ರೈತರು ಬದುಕನ್ನು ಕಳೆದುಕೊಂಡಿದ್ದಾರೆ. ಹಣಕಾಸು ವಲಯ ಸೇರಿದಂತೆ ಸಾರ್ವಜನಿಕ ವಲಯ, ರೈಲ್ವೆ, ರಕ್ಷಣಾ, ವಲಯದ ಆರ್ಡಿನೆನ್ಸ್ ಕಾರ್ಖಾನೆಗಳು ಬಂದರುಗಳು ಮುಂತಾದ ಸರಕಾರಿ ಮತ್ತು ಸೇವಾ ಸಂಸ್ಥೆಗಳ ಖಾಸಗೀಕರಣವನ್ನು ನಿಲ್ಲಿಸಬೇಕು. ಸರಕಾರಿ ಮತ್ತು ಪಿಎಸ್ ಯುಗಳ ನೌಕರರ ಮೇಲಿನ ಅಕಾಲಿಕ ನಿವೃತ್ತಿಯ ಮೇಲಿನ ಸುತ್ತೋಲೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು. ಎಲ್ಲ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಒದಗಿಸಿ ಎನ್ಪಿಎಸ್ ರದ್ದು ಮಾಡಿ ಹಿಂದಿನ ಯೋಜನೆಯನ್ನು ಪುನರ್ ಸ್ಥಾಪಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯುನ ಎನ್.ಡಿ. ಕುಟ್ಟಪ್ಪ, ಎಐಟಿಯುಸಿನ ಮಣಿ, ಕುಮಾರ್, ಸಿಪಿಐನ ರಜನಿಕಾಂತ್ ಸೇರಿದಂತೆ ಹಲವಾರು ಮುಖಂಡರುಗಳು ಪಾಲ್ಗೊಂಡಿದ್ದರು.