ಮಡಿಕೇರಿ, ನ. 28: ಎನ್.ಡಿ.ಆರ್.ಎಫ್ನ ಮೂಲಕದ ಮಳೆ ಹಾನಿ ಪರಿಹಾರದ ಹಣವನ್ನು ನಷ್ಟಕ್ಕೆ ಒಳಗಾದ ಬೆಳೆಗಾರರ ಬ್ಯಾಂಕ್ ಅಕೌಂಟ್ಗೆ ಇದೀಗ ನೇರವಾಗಿ ಪಾವತಿ ಮಾಡಲಾಗುತ್ತಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪರಿಹಾರದ ಮೊತ್ತ ಕುಂಠಿತಗೊಂಡಿದೆ ಎಂದು ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ನಾಪೋಕ್ಲುವಿನ ಡಾ.ಸಣ್ಣುವಂಡ ಎಮ್ ಕಾವೇರಪ್ಪ ‘ಶಕ್ತಿ’ ತಿಳಿಸಿದ್ದಾರೆ.
ಕಳೆದ ವರ್ಷ 2 ಹೆಕ್ಟೆರ್ಗೆ ತಲಾ ರೂ.56,000 ಪರಿಹಾರ ಮೊತ್ತವನ್ನು ನಷ್ಟಗೊಂಡ ಬೆಳೆಗಾರರಿಗೆ ನೀಡಲಾಗಿತ್ತು. ಆದರೆ ಈ ವರ್ಷ 2 ಹೆಕ್ಟೆರ್ಗೆ ತಲಾ ಕೇವಲ ರೂ.35,000 ಮಾತ್ರ ಪಾವತಿ ಮಾಡಲಾಗುತ್ತಿದೆ. ಪ್ರತಿ ಬೆಳೆಗಾರರಿಗೆ ಇದರಿಂದ ಸುಮಾರು ರೂ.21,000 ದಷ್ಟು ಮೊತ್ತ ಕಡಿಮೆಯಾಗಿದೆ. ಬೆಳೆಗಾರರು ಮಳೆ ನಷ್ಟದಿಂದ ಈಗಾಗಲೇ ತೀವ್ರ ಬವಣೆಗೆ ಒಳಗಾಗಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಪರಿಹಾರ ಮೊತ್ತದ ಪ್ರಮಾಣವನ್ನು ಕಳೆದ ವರ್ಷದಷ್ಟೆ ಮೊತ್ತಕ್ಕೆ ಏರಿಕೆಗೊಳಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಕಾವೇರಪ್ಪ ಜಿಲ್ಲೆಯ ಬೆಳೆಗಾರರ ಪರವಾಗಿ ಮನವಿ ಮಾಡಿದ್ದಾರೆ.