ಸುಂಟಿಕೊಪ್ಪ, ನ. 28: ಕರ್ನಾಟಕ ರಾಜ್ಯ ಸರ್ಕಾರ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಕೊಡಗು ಜಿಲ್ಲಾ ಪಂಚಾಯಿತಿ, ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಕೆದಕಲ್ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಮಟ್ಟದ ಪೋಷಣ ಅಭಿಯಾನವನ್ನು ಆಯೋಜಿಸಲಾಯಿತು.
ಕಿರಿಯ ಆರೋಗ್ಯ ಸಹಾಯಕಿಯಾದ ಕಾಂತಿಮಣಿ ಅವರು ಉದ್ಘಾಟಿಸಿ ಮಾತನಾಡಿ ಮಗು ಮತ್ತು ಮಕ್ಕಳ ಆರೈಕೆ ಬಗ್ಗೆ ಪೋಷಕರ ಪಾತ್ರವು ಮಹತ್ತರದ್ದಾಗಿದೆ. ತಾಯಿ ಎದೆಹಾಲು ಮಗುವಿಗೆ ಬೆಳವಣಿಗೆಗೆ ಅತಿಮುಖ್ಯವಾಗಿದೆ ಎಂದರು. ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿಯನ್ನು ನೀಡಿದರು. ಹಾಲೇರಿ, ಹೊರೂರು, ಮೋದೂರು ಹಾಗೂ ಕೆದಕಲ್ ಗ್ರಾಮ ವ್ಯಾಪ್ತಿಯ 2019-20ನೇ ಸಾಲಿನ ಬಿಇಸಿ ಮತ್ತು ಬಿಸಿಸಿಯ ಪೋಷಣ ಅಭಿಯಾನ, ಕಾರ್ಯಕ್ರಮದ ಅಂಗವಾಗಿ ಅನ್ನ ಪ್ರಾಶನ, ಅಕ್ಷರಾಭ್ಯಾಸ ಮತ್ತು ಆರೋಗ್ಯವಂತ ಮಕ್ಕಳ ಶಿಶು ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರಾದ ನಳಿನಿ, ಮಂಜುಳ, ಶೋಭ, ಬಿಂದು, ಆಶಾ ಕಾರ್ಯಕರ್ತೆಯರಾದ ನಿರ್ಮಲ, ಗೀತಾ ಅಂಗನವಾಡಿ ಸಹಾಯಕಿಯರು ಇದ್ದರು. ಸಭೆಯಲ್ಲಿ ಮಕ್ಕಳ ತಾಯಂದಿರು, ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಪಾಲ್ಗೊಂಡಿದ್ದರು. ಮಕ್ಕಳಿಗೆ ಅಕ್ಷರಾಭ್ಯಾಸ, ಪೌಷ್ಟಿಕ ಆಹಾರ ಪ್ರದರ್ಶನ ಹಾಗೂ ಆರೋಗ್ಯವಂತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸಮಾರಂಭದ ಮೊದಲಿಗೆ ಮಂಜುಳ ಸ್ವಾಗತಿಸಿ, ನಳಿನಿ ನಿರೂಪಿಸಿ, ಶೋಭ ವಂದಿಸಿದರು.