ಗೋಣಿಕೊಪ್ಪಲು, ನ.28: ಎಲ್ಲಾ ಸಮುದಾಯಗಳ, ಜನಪ್ರತಿನಿಧಿಗಳ, ಸಂಘ ಸಂಸ್ಥೆಗಳ ನಿರಂತರ ಹೋರಾಟದ ಫಲವಾಗಿ ಪೊನ್ನಂಪೇಟೆ ನೂತನ ತಾಲೂಕು ಅಸ್ತಿತ್ವಕ್ಕೆ ಬಂದಿದ್ದು ಸರ್ಕಾರದ ವತಿಯಿಂದ ಅಧಿಕೃತವಾಗಿ ತಾ.29ರಂದು (ಇಂದು) ಹೊಸ ತಾಲೂಕು ಉದ್ಘಾಟನೆಗೊಳ್ಳಲಿದೆ. ರಾಜ್ಯ ಸರ್ಕಾರದ ಕಂದಾಯ ಸಚಿವ ಆರ್.ಅಶೋಕ್ ಕಾರ್ಯಕ್ರಮದಲ್ಲಿ ಭಾಗಿಗಳಾಗುವ ಮೂಲಕ ನೂತನ ತಾಲೂಕನ್ನು ಉದ್ಘಾಟನೆ ಗೊಳಿಸಲಿದ್ದಾರೆ. ಹಲವು ಸಚಿವರು,ಜಿಲ್ಲೆಯ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನೂತನ ತಾಲೂಕಿನ ಅಭಿವೃದ್ಧಿಗಾಗಿ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ವಿಶೇಷ ಕಾಳಜಿಯಿಂದ ಸರ್ಕಾರ ರೂ. 25 ಲಕ್ಷ ಹಣವನ್ನು ಬಿಡುಗಡೆಗೊಳಿಸಿದೆ.
ಕೋವಿಡ್ -19 ಹಿನ್ನೆಲೆಯಲ್ಲಿ ಕಾರ್ಯಕ್ರಮವು ತಾಲೂಕು ಕಚೇರಿಯ ಸಭಾಂಗಣದಲ್ಲಿ ಆಯೋಜನೆಗೊಂಡಿದೆ. ನೂರು ಮಂದಿ ಕುಳಿತುಕೊಳ್ಳುವ ವ್ಯವಸ್ಥೆ ಇರುವ ಈ ಸಭಾಂಗಣದಲ್ಲಿ ಕಾರ್ಯಕ್ರಮವು ಔಪಚಾರಿಕವಾಗಿ ನಡೆಯುವ ಹಿನ್ನೆಲೆಯಲ್ಲಿ ಹೆಚ್ಚಾಗಿ ಜನರು ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡ ತಾಲೂಕು ಹೋರಾಟ ಸಮಿತಿಯು ಡಿ.3ನೇ ವಾರದಲ್ಲಿ ಬೃಹತ್ ಕಾರ್ಯಕ್ರಮ ನಡೆಸುವ ಮೂಲಕ ತಾಲೂಕು ಹೋರಾಟಕ್ಕೆ ದುಡಿದ ಮಹನೀಯರನ್ನು,ಮಂತ್ರಿಗಳನ್ನು,ಮಾಜಿ ಮಂತ್ರಿಗಳನ್ನು ಜಿಲ್ಲೆಯ ಜನಪ್ರತಿನಿಧಿಗಳನ್ನು ಸಂಘಸಂಸ್ಥೆಯ ಪ್ರಮುಖರನ್ನು ಆಹ್ವಾನಿಸಿ ಬೃಹತ್ ವೇದಿಕೆಯಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ನಡೆಸಲು ಚಿಂತನೆ ನಡೆಸಿದೆ.
ಇದರಿಂದಾಗಿ ತಾಲೂಕು ಹೋರಾಟ ಸಮಿತಿಯ ಪದಾಧಿಕಾರಿಗಳನ್ನು ದಾನಿಗಳನ್ನು, ಹೋರಾಟಗಾರರನ್ನು ಸ್ಮರಿಸಿಕೊಳ್ಳುವ ಅವಕಾಶ ಲಭ್ಯವಾಗಲಿದೆ. ಈಗಾಗಲೇ ಈ ಬಗ್ಗೆ ನೂತನ ತಾಲೂಕು ಹೋರಾಟ ಸಮಿತಿಯ ಕೆಲವು ಪದಾಧಿಕಾರಿಗಳು ಮಾತುಕತೆ ನಡೆಸಿದ್ದು, ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಮೂಡಿ ಬರಲು ಹಲವು ಪೂರ್ವಭಾವಿ ಸಭೆಗಳನ್ನು ನಡೆಸಲು ಚಿಂತನೆ ನಡೆಸಿದ್ದಾರೆ. ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಸೇರಿದಂತೆ ಸಾಂಸ್ಕøತಿಕ ಕಾರ್ಯಕ್ರಮವು ಮೂಡಿ ಬರುವ ಸಾಧ್ಯತೆ ಇದೆ.