ಕೋವಿಡ್ ಮಾರ್ಗಸೂಚಿ ಪರಿಷ್ಕರಣೆ
ಬೆಂಗಳೂರು, ನ. 28: ಕೋವಿಡ್-19 ನಿಯಂತ್ರಣ, ನಿಗಾವಣೆ ಮತ್ತು ಜಾಗೃತಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯದ ಸೂಚನೆಯಂತೆ ರಾಜ್ಯದಲ್ಲಿ ಮಾರ್ಗಸೂಚಿ ಹೊರಡಿಸಿದ್ದು, ಇದು ಡಿಸೆಂಬರ್ ಅಂತ್ಯದವರೆಗೆ ಜಾರಿಯಲ್ಲಿರುತ್ತದೆ. ರಾಜ್ಯದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಆದೇಶ ಜಾರಿ ಮಾಡಿದ್ದಾರೆ. ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುವ ಹಿನ್ನೆಲೆ ವ್ಯಾಪಾರ ಚಟುವಟಿಕೆಗಳಿಗೆ ಮಾತ್ರ ವಸ್ತು ಪ್ರದರ್ಶನ ಮಳಿಗೆಗಳನ್ನು ನೀಡಬೇಕು, ಒಳಾಂಗಣ ಸ್ಥಳಗಳಲ್ಲಿ 200 ಜನರ ಪರಿಮಿತಿಗೆ ಒಳಪಟ್ಟು ಸಭಾಭವನದ ಸಾಮಥ್ರ್ಯವನ್ನು ಶೇ. 50ಕ್ಕೆ ಮಾತ್ರ ನಿಯಂತ್ರಿಸಬೇಕು, ಇದೇ ಮಾನದಂಡದಡಿ ಧಾರ್ಮಿಕ, ಕ್ರೀಡಾ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡಬಹುದು.
ಜುಲೈಗೆ 1 ಲಕ್ಷ ಮನೆ ಪೂರ್ಣ
ಬೆಂಗಳೂರು, ನ. 28: ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆಯಡಿ ನಿರ್ಮಾಣ ಮಾಡಲಾಗುತ್ತಿರುವ ಮನೆಗಳನ್ನು ಮುಂದಿನ ವರ್ಷದ ಜೂನ್ ಅಥವಾ ಜುಲೈ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಜತೆ ಸಭೆ ನಡೆಸಿದ ಬಳಿಕ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, 46,499 ಮನೆಗಳನ್ನು 4,475 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡುವ ಸಂಬಂಧ ಈ ಹಿಂದಿನ ಸರ್ಕಾರಗಳು ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಈಗ 43,867 ಮನೆ ಗಳನ್ನು ನಿರ್ಮಿಸಲು 6-7 ಗುತ್ತಿಗೆದಾರರಿಗೆ ಗುತ್ತಿಗೆ ನೀಡಲಾಗಿದೆ. 31 ಸಾವಿರಕ್ಕೂ ಹೆಚ್ಚು ಮನೆಗಳ ಅಡಿಪಾಯ ಮುಗಿದು ಮುಂದಿನ ಕಾರ್ಯ ನಡೆದಿದೆ. 17 ಮನೆಗಳ ಛಾವಣಿ ಮತ್ತು 16 ಮನೆಗಳನ್ನು ಪ್ರಾಯೋಗಿಕ ಆಧಾರದ ಮೇಲೆ ನಿರ್ಮಿಸಲಾಗಿದೆ. ಬಾಕಿ ಉಳಿದ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುತ್ತೇಂವೆ. ಶೇ. 50 ರಷ್ಟನ್ನು ಶಾಸಕರು ಮತ್ತು ಸಂಸ ದರು ಶಿಫಾರಸು ಮಾಡಿದವರಿಗೆ ಹಾಗೂ ಉಳಿದ ಶೇ. 50 ರಷ್ಟನ್ನು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿರುವ ಮಧ್ಯಮ ಬಡ ವರ್ಗದವರಿಗೆ ನೀಡಲಾಗುತ್ತದೆ. ಅವರಿಗೂ ಸಹ ಸ್ಥಳ ತೋರಿಸಿ ಅವರು ಇಚ್ಛೆಪಟ್ಟ ಸ್ಥಳದಲ್ಲಿಯೇ ಮಂಜೂರು ಮಾಡಲಾಗುವುದು.
ಡಿ.3 ರಂದು ರೈತರೊಂದಿಗೆ ಚರ್ಚೆ
ನವದೆಹಲಿ, ನ. 28: ಮೂರು ನೂತನ ಕೃಷಿ ಕಾನೂನುಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣ ರೈತರು ರಾಷ್ಟ್ರ ರಾಜಧಾನಿಯಲ್ಲಿ ರೊಚ್ಚಿಗೆದ್ದಿರುವಂತೆಯೇ, ಅವರ ಸಮಸ್ಯೆಗಳನ್ನು ಬಗೆಹರಿಸಲು ಡಿ. 3 ರಂದು ಮತ್ತೆ ರೈತರ ಒಕ್ಕೂಟಗಳೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿರುವುದಾಗಿ ಕೇಂದ್ರ ಗೃಹ ಸಚಿವ ನರೇಂದ್ರ ಸಿಂಗ್ ತೋಮರ್ ಪುನರುಚ್ಚರಿಸಿದ್ದಾರೆ. ರೈತರ ಏಳಿಗೆಗೆ ಅಗತ್ಯವಾದ ಯಾವುದೇ ಕೆಲಸವನ್ನು ಮಾಡಲು ಸರ್ಕಾರ ಸಿದ್ಧವಿದೆ. ಡಿಸೆಂಬರ್ 3 ರಂದು ಮತ್ತೆ ಮಾತುಕತೆಗೆ ಆಹ್ವಾನಿಸಿದ್ದು, ಅವರು ಬರುವ ವಿಶ್ವಾಸವಿದೆ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರಂತರವಾಗಿ ಕನಿಷ್ಟ ಬೆಂಬಲ ಬೆಲೆಯನ್ನು ಹೆಚ್ಚಿಸಿದ್ದು, ರೈತರಿಗಾಗಿ 1 ಲಕ್ಷ ಕೋಟಿ ಮೂಲಸೌಕರ್ಯ ನಿಧಿಯನ್ನು ಸ್ಥಾಪಿಸಲಾಗಿದೆ ಎಂದು ತೋಮರ್ ಹೇಳಿದ್ದಾರೆ. ಪ್ರತಿಪಕ್ಷಗಳು ಈ ವಿಚಾರವನ್ನು ರಾಜಕೀಯಗೊಳಿಸುತ್ತಿವೆ ಎಂದು ಆರೋಪಿಸಿದ ಅವರು, ಒಂದು ವೇಳೆ ರಾಜಕೀಯ ಪಕ್ಷಗಳು ರಾಜಕೀಯ ಮಾಡಲು ಬಯಸಿದರೆ ಅವರ ಸ್ವಂತ ಹೆಸರಿನಲ್ಲಿ ಮಾಡಲಿ, ಆದರೆ, ರೈತರ ಹೆಸರಿನಲ್ಲಿ ಮಾಡಬಾರದು ಎಂದರು.
ಮೆರೈನ್ ಕಮಾಂಡೋಗಳ ನಿಯೋಜನೆ
ನವದೆಹಲಿ, ನ. 28: ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ, ಪೂರ್ವ ಲಡಾಕ್ನ ಪಂಗೊಂಗ್ ಸರೋವರ ಪ್ರದೇಶದಲ್ಲಿ ಭಾರತೀಯ ನೌಕಾಪಡೆಯ ಮೆರೈನ್ ಕಮಾಂಡೋಗಳನ್ನು (ಮಾರ್ಕೋಸ್) ಕೇಂದ್ರ ಸರ್ಕಾರ ನಿಯೋಜಿಸಿದೆ. ಪೂರ್ವ ಲಡಾಕ್ನಲ್ಲಿ ಮಾರ್ಕೋಸ್ ಅನ್ನು ನಿಯೋಜಿಸುವುದರ ಹಿಂದಿನ ಉದ್ದೇಶ. ಅದಾಗಲೇ ಭಾರತೀಯ ವಾಯುಪಡೆಯ ಗರುಡ ಪಡೆ ಮತ್ತು ಭಾರತೀಯ ಸೇನೆಯ ಪ್ಯಾರಾ ವಿಶೇಷ ಪಡೆಗಳು ಘರ್ಷಣೆಗಳ ಬಳಿಕ ನಿಯೋಜನೆಗೊಂಡಿದ್ದು ಇದೀಗ ಮಾರ್ಕೋಸ್ ಪಡೆಯನ್ನು ನಿಯೋಜಿಸುವ ಮೂಲಕ ಹೆಚ್ಚಿನ ಬಲವನ್ನು ತರುವುದಾಗಿದೆ. ಭಾರತೀಯ ಮತ್ತು ಚೀನೀ ಪಡೆಗಳು ಸಂಘರ್ಷಕ್ಕೆ ಕಾರಣವಾಗಿದ್ದ ಪ್ಯಾಂಗೊಂಗ್ ಸರೋವರ ಪ್ರದೇಶದಲ್ಲಿ ಮಾರ್ಕೋಸ್ ಅನ್ನು ನಿಯೋಜಿಸಲಾಗಿದೆ. ನೌಕಾಪಡೆಯ ಕಮಾಂಡೋಗಳು ಶೀಘ್ರದಲ್ಲೇ ಸರೋವರದಲ್ಲಿ ಕಾರ್ಯಾಚರಣೆಗಾಗಿ ಹೊಸ ಬೋಟ್ಗಳನ್ನು ಪಡೆಯಲಿದ್ದಾರೆ. ಅದರಲ್ಲಿ ಸರೋವರದ ಕಾರ್ಯಾಚರಣೆಗೆ ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳಿವೆ ಎಂದು ಮೂಲಗಳು ತಿಳಿಸಿವೆ.
ಮತ್ತೆ ಮಳೆಯಾಗುವ ಸಾಧ್ಯತೆ
ಬೆಂಗಳೂರು, ನ. 28: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಶನಿವಾರ ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ ದುರ್ಬಲಗೊಂಡಿದ್ದ ನಿವಾರ್ ಚಂಡಮಾರುತ ಮತ್ತೆ ಬಲಗೊಳ್ಳುತ್ತಿದ್ದು, ವಾಯುಭಾರ ಕುಸಿತವಾಗುವ ಸಾಧ್ಯತೆಗಳಿವೆ. ಇದರಿಂದ ಡಿಸೆಂಬರ್ 1 ರಿಂದ ಮತ್ತೆ ಮೂರ್ನಾಲ್ಕು ದಿನಗಳ ಕಾಲ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಟ್ವೀಟ್ ಮಾಡಿದೆ. ನಿವಾರ್ ಚಂಡಮಾರುತದ ಬೆನ್ನಲ್ಲೇ ಮತ್ತೊಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಗಳಿದ್ದು, ದಕ್ಷಿಣ ಒಳನಾಡಿನಲ್ಲಿ ಡಿ. 1 ರವರೆಗೆ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ನ.29ರವರೆಗೆ ಮಳೆಯಾಗಲಿದ್ದು, ತಾ. 30 ಮತ್ತು ಡಿ. 1 ರಂದು ಒಣಹವೆ ನಿರೀಕ್ಷಿಸಲಾಗಿದೆ' ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ ತಿಳಿಸಿದ್ದಾರೆ.
ಸಿಎಂ ಕಾರ್ಯದರ್ಶಿ ಸಂತೋಷ್ ಚೇತರಿಕೆ
ಬೆಂಗಳೂರು, ನ. 28: ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಎಂ.ಎಸ್. ರಾಮಯ್ಯ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಸಂತೋಷ್ ಅವರನ್ನು ನಿನ್ನೆ ರಾತ್ರಿ 8.30ಕ್ಕೆ ಆಸ್ಪತ್ರೆಗೆ ಕರೆತರಲಾಯಿತು ಮತ್ತು ಅವರು ನಿದ್ದೆ ಮಾತ್ರೆಗಳನ್ನು ಸೇವಿಸಿದ್ದರು. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಶನಿವಾರ ಬೆಳಿಗ್ಗೆ ಉಪಾಹಾರ ಸೇವಿಸಿದ್ದು, ಹರ್ಷಚಿತ್ತದಿಂದಿದ್ದಾರೆ. ಇಂದು ಸಂಜೆ ಅವರನ್ನು ವಾರ್ಡ್ಗೆ ಶಿಫ್ಟ್ ಮಾಡಲಾಗುವುದು ಮತ್ತು ಅವರ ಆರೋಗ್ಯ ಸ್ಥಿತಿಯನ್ನು ಆಧರಿಸಿ ಒಂದೆರಡು ದಿನಗಳಲ್ಲಿ ಡಿಸ್ಚಾರ್ಜ್ ಮಾಡಬಹುದು ಎಂದು ಎಂ.ಎಸ್. ರಾಮಯ್ಯ ಸ್ಮಾರಕ ಆಸ್ಪತ್ರೆಯ ಅಧ್ಯಕ್ಷ ನರೇಶ್ ಶೆಟ್ಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂತೋಷ್ ಅವರು ಶುಕ್ರವಾರ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಕುಟುಂಬಸ್ಥರು ಅವರನ್ನು ನಗರದ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ತುರ್ತುನಿಗಾ ಘಟಕದಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುಪ್ರೀಂ ಮೆಟ್ಟಿಲೇರಿದ ನಟಿ ರಾಗಿಣಿ
ಬೆಂಗಳೂರು, ನ. 28: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿಯಾಗಿರುವ ನಟಿ ರಾಗಿಣಿ ದ್ವಿವೇದಿ ಇದೀಗ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ. ಕಳೆದ ಮೂರು ತಿಂಗಳಿನಿಂದ ಕಂಬಿಗಳ ಹಿಂದೆ ಸೆರೆಯಾಗಿರುವ ನಟಿ ರಾಗಿಣಿ ಜಾಮೀನು ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಸೆಪ್ಟೆಂಬರ್ನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿಯಾಗಿ ಪರಪ್ಪನ ಅಗ್ರಹರಾ ಜೈಲು ಸೇರಿದ್ದ ನಟಿ ರಾಗಿಣಿಗೆ ನ. 3 ರಂದು ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಸದ್ಯ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಗಿಣಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು ಆ ಕುರಿತ ಅರ್ಜಿ ವಿಚಾರಣೆ ಡಿಸೆಂಬರ್ 4 ರಂದು ನಡೆಯಲಿದೆ ಎನ್ನಲಾಗಿದೆ. ಈ ನಡುವೆ ಡ್ರಗ್ಸ್ ಆರೋಪದಡಿ ಸೆರೆಯಾಗಿರುವ ಇನ್ನೊಬ್ಬ ನಟಿ ಸಂಜನಾ ಗಲ್ರಾನಿ ಸಹ ತಮಗೆ ಜಾಮೀನು ನೀಡುವಂತೆ ಮತ್ತೊಮ್ಮೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.