ಕುಶಾಲನಗರ, ನ. 28: ಹಂದಿ ಬೇಟೆಗೆಂದು ತೋಟವೊಂದರಲ್ಲಿ ಕೋವಿಯಲ್ಲಿ ಮದ್ದು ತುಂಬಿಟ್ಟಿದ್ದ ಸಂದರ್ಭ ಯುವಕನೊಬ್ಬನಿಗೆ ಗುಂಡು ತಗುಲಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಕುಶಾಲನಗರ ಸಮೀಪದ ಯಡವನಾಡು ಬಳಿ ಈ ಘಟನೆ ಕೆಲವು ದಿನಗಳ ಹಿಂದೆ ನಡೆದಿದ್ದು, ರವಿಚಂದ್ರ ಎಂಬವರು ಇದೀಗ ಒಂದು ಕಾಲು ಕಳೆದುಕೊಂಡು ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿ ರುವ ಬಗ್ಗೆ ಮಾಹಿತಿ ದೊರಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಡವನಾಡು ನಿವಾಸಿ ಬಾರನ ಬೋಜಿ ಎಂಬವರ ಮೇಲೆ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ತಡವಾಗಿ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ನ.17 ರಂದು ಯಡವನಾಡು ನಿವಾಸಿ ರವಿಚಂದ್ರನ್ ಬೆಂಗಳೂರಿನಿಂದ ಬಂದ ತನ್ನ ನೆಂಟರಾದ
(ಮೊದಲ ಪುಟದಿಂದ) ಮಾಯಣ್ಣ ಮತ್ತು ಸುನಿಲ್ ಎಂಬವರೊಂದಿಗೆ ತನ್ನ ತೋಟಕ್ಕೆ ರಾತ್ರಿ ವೇಳೆ ತೆರಳಿದಾಗ ಈ ಘಟನೆ ಸಂಭವಿಸಿದೆ. ಆರೋಪಿ ಬಾರನ ಬೋಜಿ ಎಂಬಾತ ಹಂದಿ ಬೇಟೆಗೆಂದು ಕೋವಿಯಲ್ಲಿ ಗುಂಡು ತುಂಬಿಸಿ ತೋಟದ ಬೇಲಿಯಲ್ಲಿ ಅಳವಡಿಸಿರುವ ಬಗ್ಗೆ ಸಂಶಯ ವ್ಯಕ್ತಗೊಂಡಿದ್ದು, ದೂರು ದಾಖಲಾಗಿದೆ. ಆದರೆ ಘಟನೆಗೆ ಸಂಬಂಧಿಸಿದ ಕೋವಿ ಸ್ಥಳದಿಂದ ನಾಪತ್ತೆಯಾಗಿರುವುದಾಗಿಯೂ ತಿಳಿದುಬಂದಿದೆ. ಗಾಯಾಳು ರವಿಚಂದ್ರನ್ ಬೆಂಗಳೂರಿನ ಖಾಸಗಿ ಕಂಪನಿ ಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮನೆಗೆ ಬಂದಿದ್ದರು ಎನ್ನಲಾಗಿದೆ. ಕೋವಿ ಸಿಡಿದ ಹಿನ್ನೆಲೆಯಲ್ಲಿ ಗುಂಡು ರವಿಚಂದ್ರನ್ ಬಲಗಾಲಿನ ಮಂಡಿಗೆ ತಾಗಿ ತೀವ್ರ ರಕ್ತಸ್ರಾವವಾಗುವುದರೊಂದಿಗೆ ಇದೀಗ ಕಾಲು ಕತ್ತರಿಸಬೇಕಾದ ಸ್ಥಿತಿ ಸೃಷ್ಟಿಯಾಗಿದೆ ಎಂದು ತಿಳಿದುಬಂದಿದೆ. ಗಾಯಾಳುವನ್ನು ಕುಶಾಲನಗರದ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಮೈಸೂರಿನ ಅಪೋಲೊ ಆಸ್ಪತ್ರೆಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಈ ನಡುವೆ ಆರೋಪಿ ನಾಪತ್ತೆಯಾಗುವು ದರೊಂದಿಗೆ ಸೋಮವಾರಪೇಟೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದಾರೆ. -ವರದಿ:ಚಂದ್ರಮೋಹನ್