ಸುಂಟಿಕೊಪ್ಪ, ನ. 27: ಕಂದಾಯ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆ ಹಾಗೂ ನಿರ್ಲಕ್ಷ್ಯದಿಂದ ಕೊಡಗರಹಳ್ಳಿ ಗ್ರಾ.ಪಂ.ನ ನಿವಾಸಿಗಳಿಗೆ ಸೂರು ಭಾಗ್ಯ ಇಲ್ಲವಾಗಿದ್ದು, ಗ್ರಾಮ ಪಂಚಾಯಿತಿಗೆ ಕಸ ವಿಲೇವಾರಿ ಜಾಗವು ಇಲ್ಲದೆ ಪರದಾಡುವಂತಾಗಿದೆ.

ಕೊಡಗರಹಳ್ಳಿ ಅಂದಾಗೋವೆಯ ವಿರುಗುಪ್ಪೆಯಲ್ಲಿ ಸರಕಾರಿ ಪೈಸಾರಿ ಜಾಗ ಸರ್ವೆ ನಂ. 36ರಲ್ಲಿ 7.33 ಎಕರೆ ಜಾಗವಿದ್ದು, ಈ ಜಾಗವನ್ನು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರು ಗ್ರಾಮ ಪಂಚಾಯಿತಿ ಖಾತೆಗೆ ವರ್ಗಾವಣೆಗೊಳಿಸಿ ಕೊಡಿ ಎಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಮಂತ್ರಿ ಕಾಗೋಡು ತಿಮ್ಮಪ್ಪ, ಜಿಲ್ಲಾಧಿಕಾರಿಗಳಿಗೆ ಹಾಗೂ ತಹಶೀಲ್ದಾರ್‍ರವರಿಗೆ ಮನವಿ ಸಲ್ಲಿಸಿದ್ದರು. ಸುಂಟಿಕೊಪ್ಪ ನಾಡು ಕಚೇರಿಯಲ್ಲಿನ ಅಧಿಕಾರಿಗಳ ನಿರಾಶಕ್ತಿಯಿಂದ ಅದು ಇನ್ನು ಕೈಗೂಡಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕೊಡಗರಹಳ್ಳಿ ಗ್ರಾ.ಪಂ.ನಲ್ಲಿ 200ಕ್ಕೂ ಅಧಿಕ ಮಂದಿ ನಿವೇಶನ ರಹಿತರು ಇದ್ದಾರೆ. ಸೂರು ಕಲ್ಪಿಸಿಕೊಡಿ ಎಂದು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಅವರ ಮನವಿಗೆ ಕಂದಾಯ ಇಲಾಖೆಯ ಸ್ಪಂದನ ಸಿಗುತ್ತಿಲ್ಲ. ಜಾಗವನ್ನು 3 ಬಾರಿ ಸರ್ವೆ ಮಾಡಿದ್ದರೂ, ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಬಡವರಿಗೆ ಸೂರು ಕಲ್ಪಿಸಲು ಹಾಗೂ ಕಸ ವಿಲೇವಾರಿ ಮಾಡಲು ಗ್ರಾ.ಪಂ.ಗೆ ಖಾತೆಗೆ ವರ್ಗಾಹಿಸಿಕೊಡಿ ಎಂದು ಕಂದಾಯ ಇಲಾಖೆ ಗ್ರಾಮ ಲೆಕ್ಕಿಗರಿಗೆ, ತಹಶೀಲ್ದಾರರಿಗೆ, ಜಿಲ್ಲಾಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಿ ಅರ್ಜಿ ಸಲ್ಲಿಸಲಾಗಿದೆ.

ಆದರೆ, ಸುಂಟಿಕೊಪ್ಪ ನಾಡು ಕಚೇರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇನ್ನು ಕಾರ್ಯಗತವಾಗಿಲ್ಲ. ಕೂಡಲೇ ಈ ಜಾಗವನ್ನು ಕೊಡಗರಹಳ್ಳಿ ಗ್ರಾ.ಪಂ. ಖಾತೆಗೆ ವರ್ಗಾವಣೆ ಮಾಡಿಕೊಡಲು ಶಾಸಕರು ಒತ್ತಾಯ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.