ಸೋಮವಾರಪೇಟೆ, ನ. 27: ರಸ್ತೆ ಬದಿಯಲ್ಲಿ ಇಟ್ಟುಕೊಂಡಿದ್ದ ಗೂಡಂಗಡಿಯನ್ನು ತೆರವುಗೊಳಿಸಿದ್ದಕ್ಕೆ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿರುವ ಘಟನೆ ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ಜಂಬೂರು ಗ್ರಾಮದಲ್ಲಿ ಇಂದು ನಡೆದಿದೆ.
ಜಂಬೂರಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬಡಾವಣೆಯ ನಿವಾಸಿ ಅಬ್ದುಲ್ ರೆಹಮಾನ್ ಅವರ ಪುತ್ರ ಸಿದ್ದಿಕ್ ಎಂಬವರ ಮೇಲೆ, ಜಂಬೂರಿನಲ್ಲಿ ಗೂಡಂಗಡಿ ಇಟ್ಟುಕೊಂಡಿರುವ ಮಧು ಎಂಬಾತ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಜಂಬೂರು ಸಂತ್ರಸ್ತರ ಬಡಾವಣೆಯ ರಸ್ತೆ ಬದಿಯಲ್ಲಿ ಗೂಡಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಸಿದ್ದಿಕ್ ಸೇರಿದಂತೆ ಇತರರಿಗೆ, ಕಳೆದ ತಾ. 23ರಂದು ಪೊಲೀಸ್ ಠಾಣಾಧಿಕಾರಿ ಹಾಗೂ ಮಾದಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಂಗಡಿಗಳನ್ನು ತೆರವುಗೊಳಿಸುವಂತೆ ಸೂಚಿಸಿದ್ದಾರೆ.
ಅದರಂತೆ ಸಿದ್ದಿಕ್ ಅವರು ತಮ್ಮ ಗೂಡಂಗಡಿಯನ್ನು ತೆರವುಗೊಳಿಸಿದ್ದು, ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಇದೇ ಸ್ಥಳದಲ್ಲಿ ಅಂಗಡಿ ಇಟ್ಟುಕೊಂಡಿದ್ದ ಮಧು ಎಂಬಾತ ಇದನ್ನು ಸಹಿಸದೇ ಇಂದು ಬೆಳಿಗ್ಗೆ ತನ್ನ ಪಿಕ್ಅಪ್ ವಾಹನದಲ್ಲಿ ಸಿದ್ದಿಕ್ ಅವರಿಗೆ ಡಿಕ್ಕಿಪಡಿಸಲು ಯತ್ನಿಸಿದ್ದು, ಇದು ಸಫಲವಾಗದ ಹಿನ್ನೆಲೆ ಕಬ್ಬಿಣದ ರಾಡ್ನಿಂದ ತಲೆ, ಕಣ್ಣು ಹಾಗೂ ಬೆನ್ನಿನ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಈ ಸಂದರ್ಭ ತಾಯಿ ಖತೀಜ ಹಾಗೂ ಪತ್ನಿ ರೇಷ್ಮಾ ಅವರು ತಡೆಯಲು ಯತ್ನಿಸಿದ್ದು, ಅವರನ್ನೂ ತಳ್ಳಿ ಗಾಯಗೊಳಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ತೀವ್ರ ಗಾಯಗೊಂಡ ಸಿದ್ದಿಕ್ ಮಡಿಕೇರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಹಾಗೂ ಠಾಣಾಧಿಕಾರಿ ಶ್ರೀಧರ್ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.