ಮಡಿಕೇರಿ, ನ. 26: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಕೊಡಗು ವಿಭಾಗದ ವತಿಯಿಂದ ಇಂದು ನಗರದ ಪ್ರಧಾನ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಲಾಯಿತು. ಕೇಂದ್ರ ಸಂಘಟನೆಯ ಕರೆಯಂತೆ ಮುಷ್ಕರ ನಡೆದಿದ್ದು, ಪ್ರಧಾನ ಅಂಚೆ ಉಪ ಅಧೀಕ್ಷಕರಾದ ಮಂಜುನಾಥ್ ಹಾಗೂ ಮಡಿಕೇರಿಯ ಪೋಸ್ಟ್ ಮಾಸ್ಟರ್ ಎಂ.ಕೆ. ಮೋಹನ್ ಅವರ ಮೂಲಕ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸಲ್ಲಿಸಲಾಯಿತು.

ರಜೆಯನ್ನು ಕ್ಯಾಷ್ ಆಗಿ ಪರಿವರ್ತಿಸುವುದು, ಆರೋಗ್ಯ ಸೌಲಭ್ಯ, ಶೇ.20 ಪಿ.ಎ. ಹುದ್ದೆಗಳಲ್ಲಿ ಜಿ.ಡಿ.ಎಸ್. ನೌಕರರಿಗೂ ಮೀಸಲಾತಿ, ಟಿ.ಆರ್.ಸಿ.ಯನ್ನು ಮತ್ತೆ ಜಾರಿಗೆ ತರುವುದು, ಸಮವಸ್ತ್ರ, ಹಬ್ಬದ ಮುಂಗಡ, ವೈಜ್ಞಾನಿಕ ಗುರಿ ನಿಗದಿಯನ್ನು ಸಲ್ಲಿಸುವುದು, ಗುಂಪು ವಿಮೆ ಮೊತ್ತ ಹೆಚ್ಚಳ, ತುಟ್ಟಿಭತ್ಯೆ ಬಿಡುಗಡೆ ಹಾಗೂ ಪಿಡಲಿಟಿ ಬಾಂಡ್ ಪದ್ಧತಿ ರದ್ದುಗೊಳಿಸುವ ಬೇಡಿಕೆಯನ್ನು ಮುಂದಿಡಲಾಗಿದೆ.

ಪ್ರತಿಭಟನೆಯಲ್ಲಿ ವಿಭಾಗೀಯ ಅಧ್ಯಕ್ಷ ಪಿ.ಎಸ್. ಕುರುಯನ್, ಉಪಾಧ್ಯಕ್ಷ ಎ.ಯು. ಪೂಣಚ್ಚ, ಕಾರ್ಯದರ್ಶಿ ಮಂಜುನಾಥ್, ಸಹಕಾರ್ಯದರ್ಶಿ ಅಚ್ಚಯ್ಯ ಬಿ.ಸಿ., ಖಜಾಂಚಿ ಪ್ರಶಾಂತ್ ಎಸ್. ಮತ್ತಿತರರು ಪಾಲ್ಗೊಂಡಿದ್ದರು.