ನಾಪೆÇೀಕ್ಲು, ನ. 26: ಸರಕಾರ ಪೌತಿ ಖಾತೆಗೆ ಸಂಬಂಧಿಸಿದಂತೆ ಹೊರಡಿಸಿರುವ ಸುತ್ತೋಲೆಯಲ್ಲಿರುವ ಪ್ರಮಾಣ ಪತ್ರಗಳನ್ನು ಮಾತ್ರ ರೈತರು ಕಂದಾಯ ಇಲಾಖೆಗೆ ನೀಡಿದರೆ ಸಾಕು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ನಾಪೆÇೀಕ್ಲು ಗ್ರಾಮ ಪಂಚಾಯಿತಿಗೆ ಒಳಪಟ್ಟ ಅಜ್ಜಿಮುಟ್ಟ ರಸ್ತೆಯ ಕಾಂಕ್ರಿಟ್ ರಸ್ತೆಯ ಉದ್ಘಾಟನೆ ಹಾಗೂ ಡಾಮರು ರಸ್ತೆ ಕಾಮಗಾರಿಗೆ ಭೂಮಿಪೂಜೆ ನಡೆಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಪೌತಿ ಖಾತೆ ಹೆಸರಿನಲ್ಲಿ ಕಂದಾಯ ಇಲಾಖಾಧಿಕಾರಿಗಳು ಕೇಳುತ್ತಿರುವ ದಾಖಲಾತಿಗಳ ಬಗ್ಗೆ ಶಾಸಕರ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಕೆ.ಜಿ. ಬೋಪಯ್ಯ ಪೌತಿ ಖಾತೆ ಪಡೆದುಕೊಳ್ಳಲು ಇದಕ್ಕಿಂತ ಹೆಚ್ಚಿನ ಕಾನೂನು ಸರಳೀಕರಣ ಮಾಡಲು ಸಾಧ್ಯವಿಲ್ಲ. ಫಲಾನುಭವಿಗಳು ವಂಶಾವಳಿ ಪಟ್ಟಿ, ಪ್ರಮಾಣ ಪತ್ರ ನೀಡಬೇಕು. ಅದು ಸಾಧ್ಯವಿಲ್ಲದಿದ್ದರೆ ಅಧಿಕಾರಿಗಳೇ ಸ್ಥಳಕ್ಕೆ ಬಂದು ಖುದ್ದು ಪರಿಶೀಲನೆ ಮಾಡಬೇಕು. ಮರಣ ದೃಢೀಕರಣ ಪತ್ರ ಇದ್ದರೆ ನೀಡಬಹುದು. ಸಾಧ್ಯವಿಲ್ಲದಿದ್ದರೆ, ಪ್ರಮಾಣ ಪತ್ರ ನೀಡಿದರೆ ಸಾಕು ಎಂದು ತಿಳಿಸಿದರು.
ಪೌತಿ ಖಾತೆಯಲ್ಲಿರುವ ಪಟ್ಟೆದಾರರ ಮಕ್ಕಳ ಹೆಸರನ್ನು ಸೇರಿಸುವ ಕಾನೂನು ಇಲ್ಲ. ಎಲ್ಲರೂ ಸುತ್ತೋಲೆಯನ್ನು ಪರಿಶೀಲಿಸಿ ಅದರಲ್ಲಿರುವ ಕಾನೂನಿನಂತೆ ಅಧಿಕಾರಿಗಳೊಂದಿಗೆ ವ್ಯವಹರಿಸಿ. ಸುತ್ತೋಲೆಯಲ್ಲಿ ಇಲ್ಲದ ಕಾನೂನನ್ನು ರೈತರ ಮೇಲೆ ಅಧಿಕಾರಿಗಳು ಹೇರುವಂತಿಲ್ಲ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಮಾತನಾಡಿ, ಅಜ್ಜಿಮುಟ್ಟ ರಸ್ತೆಯಲ್ಲಿ ನಿರ್ಮಿಸಲಾಗಿ ರುವ 210 ಮೀ. ಕಾಂಕ್ರಿಟ್ ರಸ್ತೆ ಈಗಾಗಲೇ ಸಿದ್ಧವಾಗಿದೆ. ಮುಂದೆ 5 ಲಕ್ಷ ರೂ.ಗಳ ಡಾಮರೀಕರಣಕ್ಕೆ ಭೂಮಿಪೂಜೆ ನಡೆಸಲಾಗಿದೆ. ಇದೆಲ್ಲದಕ್ಕೂ ಶಾಸಕರಾದ ಕೆ.ಜಿ. ಬೋಪಯ್ಯ ಅನುದಾನ ನೀಡಿ ಸಹಕರಿಸಿದ್ದಾರೆ. ನೆಲಜಿ ರಸ್ತೆಯ ಸಾಲಿಮಾರ್ ಮಿಲ್‍ನಿಂದ ಕೂರುಳಿ ಮೂಲಕ ನಾಪೆÇೀಕ್ಲು ಕೊಡವ ಸಮಾಜಕ್ಕೆ ಸಂಪರ್ಕ ಕಲ್ಪಿಸಲು ಪ್ರಧಾನ ಮಂತ್ರಿ ಗ್ರಾಮ ರೋಜ್‍ಗಾರ್ ಯೋಜನೆಯಡಿಯಲ್ಲಿ ರಸ್ತೆ ನಿರ್ಮಿಸಲು ಸಹಕಾರ ನೀಡಬೇಕು. ಇದರಿಂದ ಎರಡು ಗ್ರಾಮ ಮತ್ತು ಎರಡು ಗ್ರಾಮ ಪಂಚಾಯಿತಿಗೆ ಸಂಪರ್ಕ ಕಲ್ಪಿಸುವಂತಾಗುತ್ತದೆ ಎಂದರು.
ಮನವಿ ಸಲ್ಲಿಕೆ
ಮಂಡೀರ ಕುಟುಂಬಸ್ಥರು ನಾವು ಈ ಹಿಂದೆ ತಲಕಾವೇರಿಯ ತಕ್ಕಮುಖ್ಯಸ್ಥರಾಗಿದ್ದೆವು. ಆದುದರಿಂದ ನಮಗೆ ಭಾಗಮಂಡಲ-ತಲಕಾವೇರಿ ವ್ಯವಸ್ಥಾಪನಾ ಸಮಿತಿಯಲ್ಲಿ ಖಾಯಂ ಸದಸ್ಯತ್ವ ನೀಡಬೇಕು ಎಂದು ಮನವಿ ಸಲ್ಲಿಸಿದರು. ಅದರೊಂದಿಗೆ ವಿಷ್ಣಪ್ಪ ದೇವಳ ರಸ್ತೆ ಮರುಡಾಮರೀಕರಣ, ಅಜ್ಜಿಮುಟ್ಟ ಸಂಪರ್ಕ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅನುದಾನ ನೀಡುವಂತೆ ಶಾಸಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಹೋಬಳಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಮುಖಂಡರಾದ ಕೇಟೋಳಿರ ಹರೀಶ್ ಪೂವಯ್ಯ, ಎನ್.ಎಸ್. ಉದಯಶಂಕರ್, ಅರೆಯಡ ಡಿ. ಸೋಮಪ್ಪ, ಶಿವಚಾಳಿಯಂಡ ಜಗದೀಶ್, ಕೇಲೇಟಿರ ರತ್ನಾ, ಕಂಗಾಂಡ ಜಾಲಿ ಪೂವಪ್ಪ, ಮಂಡೀರ ರಾಜಪ್ಪ, ಬಾಳೆಯಡ ಮೇದಪ್ಪ, ಕೇಲೇಟಿರ ಮಾಲ ಬೋಪಯ್ಯ, ಅರೆಯಡ ಅಶೋಕ್, ಅರೆಯಡ ರತ್ನಾ ಪೆಮ್ಮಯ್ಯ, ಸುಶೀಲಮ್ಮ, ಸೇರಿದಂತೆ ಈ ವ್ಯಾಪ್ತಿಯ ಎಲ್ಲಾ ಸಾರ್ವಜನಿಕರು ಪಾಲ್ಗೊಂಡಿದ್ದರು.