ಮಡಿಕೇರಿ, ನ. 26: ಹಲವು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಮಾಡಿಕೊಂಡಿದ್ದ ಕೃಷಿ ಗಿಡಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಏಕಾಏಕಿ ತೆರವುಗೊಳಿಸಿರುವ ಘಟನೆÀ ತಾಲೂಕಿನ ಕೆ. ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬೆಟ್ಟಗೇರಿ ಗ್ರಾಮದಲ್ಲಿ ನಡೆದಿದೆ.

ಗಾಳೀಬೀಡು ಸಮೀಪದ ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಹೆಬ್ಬೆಟ್ಟಗೇರಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ತಬ್ರ ಕಾಲೋನಿಯಲ್ಲಿ ಸುಮಾರು 40ಕ್ಕೂ ಅಧಿಕ ಕುಟುಂಬಗಳು ಹಲವು ವರ್ಷಗಳಿಂದ ವಾಸವಾಗಿದೆ. ಕೆಲವು ಕುಟುಂಬಗಳು ಸರ್ಕಾರಿ ಜಮೀನಿನಲ್ಲಿ ಸಣ್ಣ ಪ್ರಮಾಣದಲ್ಲಿ ಕಾಫಿ ಕೃಷಿ ಮಾಡಿಕೊಂಡು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರೆ, ಹಲವು ಕುಟುಂಬಗಳು ಹಕ್ಕುಪತ್ರ ಪಡೆದು ವಾಸವಾಗಿದ್ದಾರೆ. ಇಲ್ಲಿನ 4-5 ಕುಟುಂಬಗಳ ಜಾಗಗಳಿಗೆ ಬುಧವಾರ ತೆರಳಿರುವ ಅರಣ್ಯ ಇಲಾಖೆ ಸಿಬ್ಬಂದಿ ಯಾವುದೇ ಮಾಹಿತಿ ನೀಡದೆ ಏಕಾಏಕಿ ಕಾಫಿ ಗಿಡಗಳನ್ನು ನಾಶ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಂಗಳವಾರ ಇಲ್ಲಿನ ಕೆಲ ನಿವಾಸಿಗಳ ಬಳಿಗೆ ಬಂದಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಇಲಾಖೆಗೆ ಸೂಕ್ತ ದಾಖಲೆ ಒದಗಿಸುವಂತೆ ಸೂಚಿಸಿದ್ದರು. ಆದರೆ, ಬುಧವಾರ ಬೆಳಿಗ್ಗೆಯೇ ಬಂದು ಫಸಲು ಬಂದಿದ್ದ ಕಾಫಿ ಗಿಡ ಹಾಗೂ ಕರಿಮೆಣಸು ಗಿಡವನ್ನೂ ನಾಶಪಡಿಸಿದ್ದಾರೆ. ಅಲ್ಲದೆ, ಹಣ್ಣು ಹಂಪಲು ಗಿಡವನ್ನೂ ನಾಶ ಮಾಡಲಾಗಿದ್ದು, ಇದು ಅರಣ್ಯದ ಸಂರಕ್ಷಣೆಯೇ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುಡ್ಡದಲ್ಲಿ ನೀರಿನ ವ್ಯವಸ್ಥೆಯೂ ಇಲ್ಲದೆ 2-3 ವರ್ಷಗಳಿಂದ ಕಷ್ಟಪಟ್ಟು ಬೆಳೆಯಲಾಗಿದ್ದ ಕಾಫಿ ಗಿಡವನ್ನೂ ಕಿತ್ತುಹಾಕಲಾಗಿದೆ. ಬಾಳೆ, ಫೈನಾಫಲ್ ಮತ್ತಿತರ ಗಿಡಗಳನ್ನೂ ನಾಶ ಮಾಡಲಾಗಿದೆ. ಇಲ್ಲಿನ ನಿವಾಸಿಗಳು ಈಗಾಗಲೇ ಫಾರಂ ನಂ. 50, 53, 57 ಅರ್ಜಿಗಳನ್ನು ಸಲ್ಲಿಸಿದ್ದು, ಇನ್ನೂ ಕೂಡ ನಿರ್ಣಯ ಆಗಿಲ್ಲ. ನಿರ್ಣಯ ಆಗುವ ಮುನ್ನವೇ ಕಾಫಿ ಗಿಡಗಳನ್ನು ನಾಶ ಮಾಡಿರುವ ಅರಣ್ಯ ಇಲಾಖೆಯ ಕ್ರಮ ಇಲ್ಲಿನ ಕೃಷಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಗುರುವಾರ ಮತ್ತೆ ಎಸಿಎಫ್ ಸ್ಥಳಕ್ಕೆ ಭೇಟಿ ನೀಡಿದ್ದು, ಈ ಸಂದರ್ಭ ಗ್ರಾಮಸ್ಥರು ಅರಣ್ಯ ಇಲಾಖೆಯ ಕ್ರಮವನ್ನು ಖಂಡಿಸಿದ್ದಾರೆ. ತಹಶೀಲ್ದಾರ್ ಕರೆಸಿ ಪರಿಶೀಲನೆ ನಡೆಸಲಾಗುವುದು ಎಂದು ಎಸಿಎಫ್ ಪ್ರತಿಕ್ರಿಯಿಸಿದ್ದು, ಇದ್ದ ಗಿಡಗಳನ್ನೂ ನಾಶ ಮಾಡಿದ ಮೇಲೆ ಪರಿಶೀಲನೆ ಮಾಡುವುದು ಯಾಕೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ನಮಗೆ ಸೂಕ್ತ ನ್ಯಾಯ ದೊರಕಬೇಕಿದ್ದು, ಇಲ್ಲಿಯವರೆಗೆ ಕಷ್ಟಪಟ್ಟು ಬೆಳೆಸಿದ ಕಾಫಿ ಗಿಡಗಳನ್ನು ನಾಶ ಮಾಡಿದ್ದಕ್ಕೆ ಸೂಕ್ತ ಪರಿಹಾರವನ್ನು ಅರಣ್ಯ ಇಲಾಖೆಯೇ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಸಂದರ್ಭ ಗ್ರಾಮಸ್ಥರಾದ ಬಾಬು, ನಾರಾಯಣ, ಶೇಷಪ್ಪ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.