ಕುಶಾಲನಗರ, ನ. 27: ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಸಂಘಟನೆ ಆಶ್ರಯದಲ್ಲಿ ಸಂವಿಧಾನ ಉಳಿಸಿ ಜಾಗೃತಿ ಪ್ರತಿಭಟನೆ ಕುಶಾಲನಗರದಲ್ಲಿ ನಡೆಯಿತು.
ಕುಶಾಲನಗರದ ಗಣಪತಿ ದೇವಾಲಯ ಮುಂಭಾಗ ಡಿಎಸ್ಎಸ್ ಜಿಲ್ಲಾ ಸಂಚಾಲಕ ಕೆ.ಬಿ.ರಾಜು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಲಾಯಿತು. ಪರಿಶಿಷ್ಟರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ, ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ, ದಿನಬಳಕೆ ವಸ್ತುಗಳು ದುಬಾರಿಯಾಗುತ್ತಿವೆ ಎಂದು ಪ್ರತಿಭಟನಾಕಾರರು ಸರಕಾರಗಳ ವಿರುದ್ಧ ಧಿಕ್ಕಾರ ಕೂಗಿದರು. ಸಂವಿಧಾನ ಉಳಿಸುವಂತೆ ಆಗ್ರಹಿಸಿ ಘೋಷಣೆ ಕೂಗಲಾಯಿತು.
ಪ್ರತಿಭಟನೆಯಲ್ಲಿ ಡಿಎಸ್ಎಸ್ ಪ್ರಮುಖರಾದ ವೀಣಾ, ಕಿರಣ್, ಆರ್ಪಿಐ ಸಂಘಟನೆಯ ಲತಾ, ಕೀರ್ತಿರಾಜು, ಅಭಿಷೇಕ್, ಖಲೀಲ್, ರಾಮು ಮತ್ತಿತರರು ಇದ್ದರು.