ಮಡಿಕೇರಿ, ನ.27: ದುಬಾರೆಯಲ್ಲಿ ಕಳೆದ ಬಾರಿಯಂತೆ ರಿವರ್ ರ್ಯಾಫ್ಟಿಂಗ್ ಮುಂದುವರೆಸಲು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಿವರ್ ರ್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕಳೆದ ಬಾರಿಯಂತೆ ಈ ಬಾರಿಯು ಸಹ ರಿವರ್ ರ್ಯಾಫ್ಟಿಂಗ್ ಮುಂದುವರೆಸುವುದು. ಬೋಟ್ ಸುಸ್ಥಿತಿ ಸಂಬಂಧ ಪ್ರಮಾಣ ಪತ್ರ, ಪರವಾನಗಿ ಪತ್ರ ಹಾಗೂ ವಿಮಾ ಪ್ರಮಾಣ ಪತ್ರ ಪಡೆದಿರಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಒಂದು ಬೋಟ್‍ನಲ್ಲಿ 6 ಮಂದಿ ಮಾತ್ರ ತೆರಳಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ದುಬಾರೆ ಇನ್ ಪ್ರತಿನಿಧಿ ರತೀಶ್ ಅವರು ಬೋಟ್ ಸುಸ್ಥಿತಿ ಸಂಬಂಧ ಪಿಟ್‍ನೆಸ್ ಪ್ರಮಾಣ ಪತ್ರ ಪಡೆಯಲಾಗಿದೆ. ಜೊತೆಗೆ ಅನುಮತಿ ಪತ್ರವನ್ನು ಸಹ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು. ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಈಶ್ವರ ಕುಮಾರ ಖಂಡು, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ರಿವರ್ ರ್ಯಾಫ್ಟಿಂಗ್ ನಿರ್ವಹಣೆ ಬಗ್ಗೆ ಹಲವು ಮಾಹಿತಿ ನೀಡಿದರು.

ಜಿ.ಪಂ.ಯೋಜನಾ ನಿರ್ದೇಶಕ ಶ್ರೀಕಂಠ ಮೂರ್ತಿ, ಡಿವೈಎಸ್‍ಪಿ ದಿನೇಶ್ ಕುಮಾರ್, ಅಗ್ನಿ ಶಾಮಕ ಇಲಾಖೆಯ ಅಧಿಕಾರಿ ಪಿ.ಚಂದನ್, ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಅಧಿಕಾರಿ ಚೇತನ್, ನಂಜರಾಯಪಟ್ಟಣ ಗ್ರಾ.ಪಂ. ಪಿಡಿಒ ಕಲ್ಪ, ರಿವರ್ ರ್ಯಾಫ್ಟಿಂಗ್ ಪ್ರತಿನಿಧಿಗಳಾದ ಕೃಷ್ಣಪ್ಪ, ವಿಶ್ವ ಇತರರು ಇದ್ದರು.