ಕೂಡಿಗೆ, ನ. 27: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿನ್ನೇನಹಳ್ಳಿಯ ದೇವರಕೆರೆ ಸುತ್ತಮುತ್ತಲಿನಲ್ಲಿ ಶುಕ್ರವಾರ ಬೆಳಗ್ಗಿನ ಜಾವ 19 ಕಾಡಾನೆಗಳು ಕಾಣಿಸಿ ಕೊಂಡಿವೆ. ಅಲ್ಲಿನ ಜಮೀನುಗಳಿಗೆ ಲಗ್ಗೆಯಿಡುತ್ತಿದ್ದ ಕಾಡಾನೆಗಳನ್ನು ಜನರು ಕಾಡಿನತ್ತ ಓಡಿಸಲು ಮುಂದಾದರು. ನಂತರ ಅರಣ್ಯ ಸಿಬ್ಬಂದಿಗಳು ಗ್ರಾಮಸ್ಥರು ಸೇರಿ ಕಾಡಾನೆಗಳನ್ನು ಕಾಡಿನತ್ತ ಅಟ್ಟಿದರು. ಚಿನ್ನೇನಹಳ್ಳಿಯ ಅರಣ್ಯ ಪ್ರದೇಶದಿಂದ ಬಂದಿದ್ದ ಮರಿಗಳು ಸೇರಿದಂತೆ 19 ಕಾಡಾನೆಗಳು ಗುರುವಾರ ರಾತ್ರಿ ಬ್ರಹ್ಮಯ್ಯ ಎಂಬುವರ 3 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಕಾಫಿ, ತೆಂಗು, ಬಾಳೆ, ದೇವಮ್ಮ ಎಂಬವರ ಬೆಳೆದಿದ್ದ ಶುಂಠಿ ಬೆಳೆಗಳನ್ನು ನಾಶಪಡಿಸಿವೆ. (ಮೊದಲ ಪುಟದಿಂದ) ಅಲ್ಲದೆ ಪೈಪ್‍ಗಳನ್ನು ಸಹ ತುಳಿದು ನಾಶಪಡಿಸಿದ್ದು ಸುಮಾರು ರೂ. 2 ಲಕ್ಷ ನಷ್ಟವಾಗಿದೆ. ಬೆಳೆ ನಾಶವಾಗಿರುವ ಸ್ಥಳವನ್ನು ಅರಣ್ಯ ಇಲಾಖೆಯರು ಪರಿಶೀಲಿಸಿ ಸೂಕ್ತವಾದ ಪರಿಹಾರವನ್ನು ಒದಗಿಸಬೇಕೆಂದು ನಷ್ಟಕ್ಕೊಳಗಾದ ರೈತರು ಮನವಿ ಮಾಡಿದ್ದಾರೆ.
ಕಾಡಾನೆಗಳ ಹಿಂಡನ್ನು ನೋಡಿದ ಗ್ರಾಮಸ್ಥರು ಭಯಭೀತರಾಗಿದ್ದು, ಸಂಜೆಯಾದೊಡನೆ ಈ ಮಾರ್ಗದಲ್ಲಿ ತಿರುಗಾಡಲು ಭಯ ಪಡುವಂತಾಗಿದೆ.
ಹೆಬ್ಬಾಲೆ ಉಪ ವಲಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
- ನಾಗರಾಜಶೆಟ್ಟಿ