ಸಿಎಂ ನಿರ್ಧಾರಗಳಿಗೆ ಹೈಕಮಾಂಡ್ ಬ್ರೇಕ್
ಬೆಂಗಳೂರು, ನ. 27: ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆ ಎಲ್ಲರ ಚಿತ್ತ ಇದೀಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರತ್ತ ನೆಟ್ಟಿದೆ. ಈ ಬೆಳವಣಿಗೆ ನಡುವೆಯೇ ದಿಢೀರ್ ಎಂದು ಹೈಕಮಾಂಡ್ನಿಂದ ದೂರವಾಣಿ ಕರೆಯೊಂದು ಬಂದು ಯಡಿಯೂರಪ್ಪ ಅವರ ವೇಗಕ್ಕೆ ತಡೆ ನೀಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಡಿಯೂರಪ್ಪ ಅವರಿಗೆ ಇಂದು ಬೆಳಿಗ್ಗೆ ಕರೆ ಮಾಡಿ ರಾಜಕೀಯ ತೀರ್ಮಾನಗಳಿಗೆ ನಿಯಂತ್ರಣ ಹೇರಿಕೊಳ್ಳುವಂತೆ ಸೂಚನೆ ನೀಡಿದರು. ನಿಗಮ-ಮಂಡಳಿಗಳಿಗೆ ನೇಮಕ, ಸಂಪನ್ಮೂಲ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಸೂಚನೆ, ಸಾಲು ಸಾಲು ನಿಗಮಗಳ ರಚನೆ ಮಾಡುವ ಮೂಲಕ ಯಡಿಯೂರಪ್ಪ ವರಿಷ್ಠರಿಗೆ ಸೆಡ್ಡು ಹೊಡೆಯುವ ಪ್ರಯತ್ನ ಮಾಡಿದ್ದರು. ಲಿಂಗಾಯಿತ ಮತ್ತು ವೀರಶೈವ ಸಮುದಾಯಕ್ಕೆ ಮೀಸಲಾತಿ ಪ್ರಕಟಿಸಲು ಮುಂದಾಗಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಡಿಸೆಂಬರ್ ಎರಡನೇ ವಾರದಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಸಲು ಹೈಕಮಾಂಡ್ ಸೂಚಿಸಿದೆ ಎಂಬ ಊಹಾಪೋಹದ ಸುದ್ದಿಗಳು ಬಿಜೆಪಿಯಲ್ಲಿ ಹರಿದಾಡುತ್ತಿದ್ದು, ಅದಕ್ಕೆ ಪೂರಕ ಎಂಬಂತೆ ಯಡಿಯೂರಪ್ಪ ಅವರೂ ಒಂದಾದ ಮೇಲೊಂದರಂತೆ ದಿಢೀರ್ ನಿರ್ಧಾರಗಳನ್ನು ಕೈಗೊಂಡು ರಾಜಕೀಯ ದಾಳ ಉರುಳಿಸುತ್ತಿದ್ದಾರೆ. ಇದು ರಾಜಕೀಯವಾಗಿ ಭಾರೀ ಕುತೂಹಲ ಕೆರಳಿಸಿದೆ.
ಸಿಎಂ ಸಭೆಗೆ ಸಂಸದರ ಗೈರು
ಬೆಂಗಳೂರು, ನ. 27: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯದ ಬಿಜೆಪಿ ಸಂಸದರ ಸಭೆ ನಡೆಸಿದರು. ಸಭೆಗೆ ಕೇವಲ 11 ಸಂಸದರು ಮಾತ್ರ ಆಗಮಿಸಿದ್ದು, ಕೇವಲ ಅರ್ಧ ಗಂಟೆಯಲ್ಲಿ ಸಭೆಯನ್ನು ಮುಗಿಸಲಾಯಿತು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಸಂಸದರಾದ ಶಿವಕುಮಾರ್ ಉದಾಸಿ, ಅಮರೇಶ ನಾಯ್ಕ್, ಸಂಗಣ್ಣ ಕರಡಿ, ದೇವೇಂದ್ರಪ್ಪ, ಪ್ರತಾಪ್ ಸಿಂಹ, ಜಿ.ಎಸ್. ಬಸವರಾಜು, ಬಿ.ವೈ. ರಾಘವೇಂದ್ರ, ಉಮೇಶ್ ಜಾಧವ್, ಪಿ.ಸಿ. ಗದ್ದಿಗೌಡರ್, ರಾಜ್ಯಸಭೆ ಸದಸ್ಯ ಕೆ.ಸಿ. ರಾಮಮೂರ್ತಿ, ಡಾ. ಕೆ. ನಾರಾಯಣ ಭಾಗಿಯಾಗಿದ್ದರು. 24 ಸಂಸದರನ್ನು ಹೊಂದಿದ್ದರೂ ದೆಹಲಿಯಲ್ಲಿ ಕೇಂದ್ರ ಸಚಿವರಿದ್ದು, ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಮತ್ತು ಶೋಭಾ ಕರಂದ್ಲಾಜೆ ಭಾಗಿಯಾಗಿದ್ದಾರೆ. ಹಾಗಾಗಿ ಅರ್ಧಕ್ಕೂ ಕಡಿಮೆ ಸಂಸದರು ಮಾತ್ರ ಆಗಮಿಸಿದ್ದರು. ಸಂಸದರೊಂದಿಗೆ ಸಿಎಂ ಯಡಿಯೂರಪ್ಪ ಅನೌಪಚಾರಿಕ ಸಭೆಯನ್ನು ಮಾತ್ರ ಮಾಡಿದರು.
ಪಾಕ್ ದಾಳಿಗೆ ಇಬ್ಬರು ಸೈನಿಕರು ಹುತಾತ್ಮ
ಶ್ರೀನಗರ, ನ. 27: ಪದೇ ಪದೇ ಕಾಲು ಕರೆದು ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ತಾನ, ಭಾರತೀಯ ಪೋಸ್ಟ್ಗಳನ್ನು ಗುರಿ ಯಾಗಿಸಿಕೊಂಡು ನಡೆಸಿದ ತೀವ್ರ ಶೆಲ್ಲಿಂಗ್ನಲ್ಲಿ ಭಾರತ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಎಲ್ಒಸಿ(ಗಡಿ ನಿಯಂತ್ರಣ ರೇಖೆ)ಯಲ್ಲಿನ ಸುಂದರ್ಬನ್ ಸೆಕ್ಟರ್ನಲ್ಲಿ ಈ ಘಟನೆ ನಡೆದಿದ್ದು, ಪಾಕಿಸ್ತಾನ ಸೇನೆಯ ತೀವ್ರ ಶೆಲ್ಲಿಂಗ್ ದಾಳಿಯಲ್ಲಿ ಇಬ್ಬರು ಯೋಧರು ಸಾವನ್ನಪ್ಪಿದ್ದಾರೆ. ಹುತಾತ್ಮ ಯೋಧರನ್ನು ನಾಯಕ್ ಪ್ರೇಮ್ ಬಹದ್ದೂರ್ ಖತ್ರಿ ಮತ್ತು ರೈಫಲ್ಮನ್ ಸುಖ್ಬೀರ್ ಸಿಂಗ್ ಎಂದು ಗುರುತಿಸಲಾಗಿದೆ. ದಾಳಿ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರೂ ಸೈನಿಕರನ್ನು ಸೇನಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಮಂಗಳೂರಿನಲ್ಲಿ ಉಗ್ರರ ಪರ ಬರಹ
ಮಂಗಳೂರು, ನ. 27: ಲಷ್ಕರ್ ಇ ತೊಯ್ಬಾ ಮತ್ತು ತಾಲಿಬಾನ್ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ ರೀತಿಯಲ್ಲಿ ಕದ್ರಿ ಬಳಿ ಅಪಾರ್ಟ್ಮೆಂಟ್ ಒಂದರ ಗೋಡೆ ಮೇಲೆ ಗೀಚುಬರಹ ಕಂಡುಬಂದಿದೆ. ಅಪಾರ್ಟ್ಮೆಂಟ್ನ ಕಂಪೌಂಡ್ ಮೇಲೆ ಯಾರೋ ಕಿಡಿಗೇಡಿಗಳು ಉಗ್ರ ಸಂಘಟನೆಗಳ ಪರ ಗೋಡೆ ಬರಹ ಬರೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಂಗಳೂರಿನ ಕದ್ರಿಯ ಸಕ್ರ್ಯೂಟ್ ಹೌಸ್ನ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ ಒಂದರ ಕಂಪೌಂಡ್ ಮೇಲೆ ಹ್ಯಾಶ್ಟ್ಯಾಗ್ ಹಾಕಿ ಲಷ್ಕರ್ ಜಿಂದಾಬಾದ್ ಎಂದು ಬರೆದು ಇಂಗ್ಲಿಷ್ನಲ್ಲಿ ಆo ಟಿoಣ ಜಿoಡಿಛಿe us ಣo iಟಿviಣe ಐಚಿshಞಚಿಡಿe-ಖಿoibಚಿ ಚಿಟಿಜ ಖಿಚಿಟibಚಿಟಿ ಣo ಜeಚಿಟ ತಿiಣh Sಚಿಟಿghis ಚಿಟಿಜ ಒಚಿಟಿveಜis' ಎಂದು ಬರೆದಿದ್ದಾರೆ. ಈ ಗೋಡೆಬರಹ ಪತ್ತೆಯಾದ ಕೂಡಲೇ ಸುತ್ತಮುತ್ತ ಇರುವ ಎಲ್ಲಾ ಸಿಸಿಟಿವಿ ಕ್ಯಾಮರಾಗಳನ್ನು ತಪಾಸಣೆ ಮಾಡಲಾಗಿದೆ. ಈ ಗೀಚುಬರಹವನ್ನು ಯಾರು ಬರೆದಿದ್ದಾರೆ, ಯಾವಾಗ ಬರೆದಿದ್ದಾರೆ, ಎಲ್ಲಿಯವರು ಎಂದು ಎಲ್ಲಾ ಸಾಧ್ಯತೆಗಳ ಬಗ್ಗೆ ತಪಾಸಣೆ ಮಾಡುತ್ತಿದ್ದೇವೆ ಎಂದು ಮಂಗಳೂರು ಪೊಲೀಸರು ತಿಳಿಸಿದ್ದಾರೆ. ಗೋಡೆಯ ಮೇಲೆ ಲಷ್ಕರ್ ಜಿಂದಾಬಾದ್ ಬರೆದವರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಹಲವಾರು ಹಿಂದೂ ಸಂಘಟನೆಗಳ ಸ್ವಯಂಸೇವಕರು ಧರಣಿ ನಡೆಸಿದ್ದಾರೆ.
ಅತ್ಯಾಚಾರಿಗಳು ನಪುಂಸಕರಾಗುತ್ತಾರೆ !
ಇಸ್ಲಾಮಾಬಾದ್, ನ. 27: ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸಚಿವ ಸಂಪುಟ ಎರಡು ಮಹತ್ವದ ನಿರ್ಧಾರ ಕೈಗೊಂಡಿದ್ದು, ಅತ್ಯಾಚಾರಿಗಳನ್ನು ನಪುಂಸಕಗೊಳಿಸುವ ಮತ್ತು ಅತ್ಯಾಚಾರ ಪ್ರಕರಣಗಳ ತನಿಖೆಗೆ ವಿಶೇಷ ಕೋರ್ಟ್ಗೆ ಸ್ಥಾಪನೆಗೆ ಅನುಮೋದನೆ ನೀಡಿದೆ.