ಉಗ್ರರ ದಾಳಿ : ಇಬ್ಬರು ಯೋಧರು ಹುತಾತ್ಮ

ಶ್ರೀನಗರ, ನ. 26: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಭಾರತೀಯ ಸೇನೆ ಮೇಲೆ ಗುಂಡಿನ ದಾಳಿ ನಡೆಸಿದ್ದು ಪರಿಣಾಮ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. 2008ರ ತಾ. 26 ರಂದು ಉಗ್ರರು ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆಸಿದ್ದರು. ಈ ಉಗ್ರ ದಾಳಿ ನಡೆದು ಇಂದಿಗೆ 12 ವರ್ಷಗಳಾದ ಹಿನ್ನೆಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಗಸ್ತು ತಿರುಗುತ್ತಿದ್ದ ಭಾರತೀಯ ಯೋಧರ ತಂಡದ ಮೇಲೆ ಮೂವರು ಉಗ್ರರ ತಂಡ ಏಕಾಏಕಿ ದಾಳಿ ನಡೆಸಿತ್ತು. ಗುಂಡಿನ ದಾಳಿಯಲ್ಲಿ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿದರೂ ಉಳಿಯಲಿಲ್ಲ. ಸದ್ಯ ಗುಂಡಿನ ದಾಳಿ ನಡೆದ ಜಾಗವನ್ನು ಭಾರತೀಯ ಸೇನೆ ಸುತ್ತುವರೆದಿದ್ದು ಉಗ್ರರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಫುಟ್ಬಾಲ್ ಆಟಗಾರ ಮರಾಡೋನ ನಿಧನ

ಬ್ಯೂನಸ್ ಐರಿಸ್, ನ. 26: ಅಜೆರ್ಂಟೀನಾದ ಖ್ಯಾತ ಫುಟ್ಬಾಲ್ ಆಟಗಾರ ಡಿಗೊ ಮರಾಡೋನ ಅವರು ಹೃದಯ ಸ್ತಂಭನಕ್ಕೊಳಗಾಗಿ ಬುಧವಾರ ರಾತ್ರಿ ನಿಧನರಾಗಿದ್ದಾರೆ. ಕೆಲವೇ ವಾರಗಳ ಹಿಂದಷ್ಟೇ ಮರಡೋನ (60) ಅವರು, ರಕ್ತ ಹೆಪ್ಪುಗಟ್ಟಿದ್ದ ಹಿನ್ನೆಲೆ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಎರಡು ವಾರಗಳ ಹಿಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ತಾ. 25 ರಂದು ರಾತ್ರಿ ಬ್ಯೂನಸ್ ಐರಿಸ್‍ನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಡಿಗೊ ಮರಡೋನ ಫುಟ್ಬಾಲ್ ದಂತಕಥೆಯೆಂದೇ ಖ್ಯಾತಿ ಪಡೆದಿದ್ದರು. ಅಜೆರ್ಂಟೀನಾದ ಅಧ್ಯಕ್ಷರು ಫುಟ್ಬಾಲ್ ದಂತಕಥೆ ನಿಧನಕ್ಕೆ ಸಂತಾಪ ಸೂಚಿಸಿದ್ದು ರಾಷ್ಟ್ರೀಯ ಶೋಕ ಘೋಷಿಸಿದ್ದಾರೆ. 1986 ರಲ್ಲಿ ಮರಡೋನಾ ನೇತೃತ್ವದ ತಂಡ ಪಶ್ಚಿಮ ಜರ್ಮನಿಯನ್ನು ಮಣಿಸಿ ವಿಶ್ವಕಪ್ ಗೆದ್ದಿತ್ತು. ಮರಡೋನ ಅವರ ದಿ ಹ್ಯಾಂಡ್ ಆಫ್ ಗಾಡ್ ಎಂದೇ ಕರೆಯಲ್ಪಡುವ ಗೋಲು ಪ್ರಸಿದ್ಧವಾಗಿದೆ.

ಒಂದು ರಾಷ್ಟ್ರ-ಒಂದು ಚುನಾವಣೆ

ನವದೆಹಲಿ, ನ. 26: ದೇಶದಲ್ಲಿ "ಒಂದು ರಾಷ್ಟ್ರ, ಒಂದು ಚುನಾವಣೆ" ಕುರಿತ ಚರ್ಚೆ ನಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. ವೀಡಿಯೋ ಕಾನ್ಫರೆನ್ಸ್ ಮೂಲಕ ಗುಜರಾತ್‍ನ ಕೇವಾಡಿಯಾದಲ್ಲಿ ನಡೆದ 80ನೇ ಅಖಿಲ ಭಾರತ ಅಧಿಕಾರಿಗಳ ಸಮಾವೇಶದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಲೋಸಭೆ, ವಿಧಾನಸಭಾ ಮತ್ತು ಸ್ಥಳೀಯ ಪಂಚಾಯಿತಿ ಮಟ್ಟದ ಎಲ್ಲಾ ಚುನಾವಣೆಗಳನ್ನು ಒಟ್ಟಿಗೆ ನಡೆಸುವ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಸಾಮಾನ್ಯ ಮತದಾರರ ಪಟ್ಟಿಯನ್ನು ಬಳಸಬಹುದು. ಈ ನಿಟ್ಟಿನಲ್ಲಿ ಡಿಜಿಟಲ್ ಕ್ರಾಂತಿ ಇದಕ್ಕೆ ನೆರವಾಗಲಿದೆ ಎಂದರು. ಈ ನಿಟ್ಟಿನಲ್ಲಿ ಸಂವಿಧಾನ ದಿನದಂದು ಗಾಂಧೀಜಿ ಮತ್ತು ಸರ್ಧಾರ್ ವಲ್ಲಭಬಾಯಿ ಪಟೇಲ್ ಅವರನ್ನು ಸ್ಮರಿಸಬೇಕಾಗಿದೆ ಎಂದರು. ಪ್ರತಿ ಕೆಲವು ತಿಂಗಳಿಗೆ, ದೇಶದ ಬೇರೆ ಬೇರೆ ಪ್ರದೇಶಗಳಲ್ಲಿ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಇದು ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಸಮಸ್ಯೆ ಬಗ್ಗೆ ಅಧ್ಯಯನ ನಡೆಯಬೇಕಿದೆ. ಇದಕ್ಕೆ ಅಧಿಕಾರಿಗಳು ಮಾರ್ಗದರ್ಶಕರಾಗಬಲ್ಲರು ಎಂದು ಪ್ರಧಾನಿ ಹೇಳಿದ್ದಾರೆ.

ಇಂದು ಬಿಜೆಪಿ ಸಂಸದರ ತುರ್ತು ಸಭೆ

ಬೆಂಗಳೂರು, ನ. 26: ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ, ನಾಯಕತ್ವ ಬದಲಾವಣೆಗಳ ಗೊಂದಲ ಹಾಗೂ ಪಕ್ಷದಲ್ಲಿ ತಲೆದೋರಿರುವ ಆಂತರಿಕ ಬಿಕ್ಕಟ್ಟಿನ ನಡುವೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಾ. 27 ರಂದು (ಇಂದು) ಸಂಜೆ 4 ಗಂಟೆಗೆ ಬಿಜೆಪಿ ಸಂಸದರ ತುರ್ತು ಸಭೆ ಕರೆದಿದ್ದು, ತೀವ್ರ ಕುತೂಹಲ ಮೂಡಿಸಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ ಒಂದೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇದೇ ಮೊದಲ ಬಾರಿಗೆ ಸಂಸದರ ಸಭೆಯನ್ನು ಕರೆದಿದ್ದಾರೆ. ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದ್ದು ರಾಜ್ಯದ ಸಂಸದರು ಸಭೆಯಲ್ಲಿ ಭಾಗಿಯಾಗುವಂತೆ ಸಂದೇಶ ರವಾನಿಸಿದ್ದಾರೆ. ಸಂಸದರ ಜೊತೆ ಬಹುತೇಕ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನಗಳು, ಯೋಜನೆಗಳು ಬಾಕಿ ಹಣ ಬಿಡುಗಡೆ ಸೇರಿದಂತೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು, ಮುಂಬರುವ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಇತಿಹಾಸ ನಿರ್ಮಿಸಿದ ಜೋ ಬೈಡನ್

ವಾಷಿಂಗ್ಟನ್, ನ. 26: ಅಮೇರಿಕಾದ ಚುನಾವಣೆಯ ಇತಿಹಾಸದಲ್ಲಿಯೇ 2020ರಲ್ಲಿ ಅತಿ ಹೆಚ್ಚು ಮತ ಚಲಾವಣೆಯಾಗಿದ್ದು, ಡೆಮೊಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಅವರು ಬರೋಬ್ಬರಿ 8 ಕೋಟಿ ಮತ ಪಡೆದಿದ್ದು, ಇತಿಹಾಸದಲ್ಲಿಯೇ ಅಧ್ಯಕ್ಷೀಯ ಅಭ್ಯರ್ಥಿ ಯೊಬ್ಬರು ಪಡೆದ ಅತಿ ಹೆಚ್ಚು ಮತಗಳಾಗಿದೆ. ಬೈಡನ್ ಅವರಿಗಿಂತ ಡೊನಾಲ್ಡ್ ಟ್ರಂಪ್ ಸಾಕಷ್ಟು ಹಿಂದಿದ್ದಾರೆ. ಆದರೂ ಅವರು ಅತಿ ಹೆಚ್ಚು ಮತಗಳನ್ನು ಪಡೆದ ಅಧ್ಯಕ್ಷೀಯ ಅಭ್ಯರ್ಥಿಗಳಲ್ಲಿ ಎರಡನೆಯ ಸ್ಥಾನ ಪಡೆದಿದ್ದಾರೆ. ಸುಮಾರು 7.4 ಕೋಟಿ ಅಮೇರಿಕನ್ನರು ಅವರಿಗೆ ಮತ ಚಲಾಯಿಸಿದ್ದಾರೆ. 2008ರಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಮಾಜಿ ಅಧ್ಯಕ್ಷ ಬರಾಕ್ ಒಬಾಮ 69.5 ಮಿಲಿಯನ್ ಮತ ಸುಮಾರು (6 ಕೋಟಿ 90 ಲಕ್ಷ) ಮತಗಳನ್ನು ಪಡೆದಿದ್ದು ಈವರೆಗಿನ ದಾಖಲೆಯಾಗಿತ್ತು. ಈಗ ಅವರದ್ದೇ ಪಕ್ಷದ ಬೈಡನ್ ಹೊಸ ದಾಖಲೆ ಬರೆದಿದ್ದಾರೆ. 2020ರ ಚುನಾವಣೆ ಅರ್ಹ ಮತದಾರರ ಪೈಕಿ ಶೇ. 66ಕ್ಕೂ ಹೆಚ್ಚು ಮತದಾರರು ಮತ ಚಲಾಯಿಸಿದ್ದಾರೆ ಎನ್ನಲಾಗಿದೆ.

ಐಟಿ ಉದ್ಯಮದ ಪಿತಾಮಹ ಕೊಹ್ಲಿ ನಿಧನ

ಬೆಂಗಳೂರು, ನ. 26: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್)ನ ಸ್ಥಾಪಕ ಮತ್ತು ಭಾರತದ ಐಟಿ ಉದ್ಯಮದ ಪಿತಾಮಹ ಎಂದೇ ಕರೆಯಲ್ಪಡುವ ಫಕೀರ್ ಚಂದ್ ಕೊಹ್ಲಿ ಅವರು ಗುರುವಾರ ನಿಧನರಾಗಿದ್ದಾರೆ. ಟಿಸಿಎಸ್‍ನ ಮೊದಲ ಸಿಇಒ ಆಗಿದ್ದ 96 ವರ್ಷದ ಎಫ್‍ಸಿ ಕೊಹ್ಲಿ ಅವರು ಇಂದು ನಿಧನರಾಗಿದ್ದು, ನಾಸ್ಕಾಮ್ ಟ್ವೀಟ್ ಮೂಲಕ ಅವರಿಗೆ ಸಂತಾಪ ಸೂಚಿಸಿದೆ.