ವರ್ಷದ 12 ಮಾಸಗಳಲ್ಲಿ ಕಾರ್ತಿಕ ಮಾಸಕ್ಕೆ ಬಹಳ ಮಹತ್ವವಿದೆ. ಅತ್ಯಂತ ಮಂಗಳ ವಾದ ಪರಮ ಪುಣ್ಯಕರವಾದ ಮಾಸ ಇದಾಗಿದೆ. ದೀಪಾರಾಧನೆಯ ಈ ಕಾರ್ತಿಕ ಮಾಸದಲ್ಲೇ ಬರುವ ಅತೀ ಪವಿತ್ರವಾದ ಹಬ್ಬ “ಉತ್ಥಾನ ದ್ವಾದಶಿ” ಅಥವಾ “ತುಳಸಿ ಹಬ್ಬ” ಶ್ರೀಮನ್ನಾರಾಯಣನು ತನ್ನ ನಿದ್ರಾಮುದ್ರೆಯನ್ನು ಬಿಟ್ಟು ಎಚ್ಚರಿಕೆ ಹೊಂದುವ ಮುದ್ರೆಯನ್ನು ತನ್ನ ಭಕ್ತರಿಗೆ ತೋರಿಸುವ ದಿನವು ದ್ವಾದಶಿಯಾದ್ದರಿಂದ ಇದನ್ನು ಉತ್ಥಾನ ದ್ವಾದಶಿ ಎಂದು ಕರೆಯುತ್ತಾರೆ. ನಾರಾಯಣನು ಹಾಲ್ಗಡಲಿನಲ್ಲಿ ತನ್ನ ಸುಖಶಯನದಿಂದ ಏಳುವ ದಿನವಾದ್ದರಿಂದ “ಕ್ಷೀರಾಭಿವ್ರತ” ಎಂದು ಇದನ್ನು ಕರೆಯುತ್ತಾರೆ. ‘ಉತ್ಥಾನ’ ಎಂದರೆ ಏಳುವುದು ಎಂದರ್ಥ.

ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯ ಪೂಜೆ ಅಥವಾ ಗೋಧೂಳಿ ಸಮಯದಲ್ಲಿ ತುಳಸಿ ಆರಾಧನೆ ಮಾಡುವುದು ಈ ಹಬ್ಬದ ವಿಶೇಷ. ತುಳಸಿಗಿಡ ಇರುವ ಸ್ಥಳದಲ್ಲಿ ಈ ಹಬ್ಬದ ಪೂಜೆಯನ್ನು ನೆರವೇರಿಸ ಬೇಕು. ವಿಷ್ಣು ಪುರಾಣದ ಪ್ರಕಾರ ಈ ದ್ವಾದಶಿಯನ್ನು ತುಳಸಿ ಕಲ್ಯಾಣದ ಪುಣ್ಯಕಾಲ ಎನ್ನುತ್ತಾರೆ. ಶ್ರೀ ತುಳಸಿ ಶ್ರೀಮನ್ನಾರಾಯಣನನ್ನು ವಿವಾಹವಾದ ಮಹಾ ಮುಹೂರ್ತವಂತೆ. ಮನೆಯ ಮುಂದಿನ ತುಳಸಿ ಕಟ್ಟೆಯಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿ ಷೋಡಷೋಪಚಾರ ಪೂಜೆ ಮಾಡುತ್ತಾರೆ. ಈ ಹಬ್ಬವನ್ನು ದೇಶದ ವಿವಿಧೆಡೆಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸುತ್ತಾರೆ. ಆದರೆ ಸಾಮಾನ್ಯವಾಗಿ ವಿಷ್ಣುವನ್ನು ಹಾಗೂ ಧಾತ್ರಿ (ಅಂದರೆ ನೆಲ್ಲಿ ಗಿಡದ ಟೊಂಗೆ) ಜೊತೆ ತುಳಸಿಯನ್ನು ಆರಾಧಿಸುವುದು ಈ ಹಬ್ಬದ ಪ್ರಮುಖ ವಿಶೇಷವಾಗಿದೆ. ತುಳಸಿ ಕಟ್ಟೆಯನ್ನು ನಾನಾ ರೀತಿಯ ಪುಷ್ಪಗಳಿಂದ ಅಲಂಕರಿಸಿ ಮಹಾವಿಷ್ಣುವನ್ನು ಪುರುಷ ಸೂಕ್ತ ದಿಂದಲೂ ಶ್ರೀತುಳಸಿಯನ್ನು ಶ್ರೀಸೂಕ್ತದಿಂದಲೂ ಪೂಜೆ ನೆರವೇರಿಸುತ್ತಾರೆ. ತುಳಸಿದೇವಿಗೆ ಮಂಗಳಸ್ನಾನ ಮತ್ತು ಹರಿದ್ರಾ ಕುಂಕುಮ ಸುಗಂಧದ್ರವ್ಯಗಳನ್ನು ಸುಮಂಗಲಿಯರು ಪೂಜೆ ಮಾಡುತ್ತಾರೆ. ಶ್ರೀಕೃಷ್ಣನ ಅಷ್ಟೊತ್ತರ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ ಪಾನಕ, ಕೋಸಂಬರಿ, ಹಣ್ಣಿನ ರಸಾಯನ ಮತ್ತು ವಿವಿಧ ಬಗೆಯ ಭಕ್ಷ್ಯಗಳಿಂದ ನೈವೇದ್ಯ ಮಾಡಿ ಮುತ್ತೈದೆಯರನ್ನು ಆಹ್ವಾನಿಸಿ ತುಳಸಿಗೆ ಆರತಿ ಬೆಳಗುವರು ಹಾಗೂ ಬಂದ ಮುತ್ತೈದೆಯರಿಗೆ ಅರಿಶಿನ, ಕುಂಕುಮ, ದಕ್ಷಿಣೆ ತಾಂಬೂಲ ವನ್ನು ಕೊಡುವುದು ವಾಡಿಕೆ. ಗೋಧೂಳಿ ಲಗ್ನದಲ್ಲಿ ಪೂಜೆ ಪ್ರಾರಂಭ ವಾಗುವುದರಿಂದ ದೀಪದ ಅಲಂಕಾರ ಮಾಡಿ ಹಣತೆಗಳಲ್ಲಿ ದೀಪವನ್ನು ಬೆಳಗುತ್ತಾರೆ. ಈ ದಿನ ತುಳಸಿ ಕಲ್ಯಾಣದ ದಿನ ಎಂಬ ನಂಬಿಕೆ ಅನಾದಿಕಾಲ ದಿಂದಲೂ ಇದೆ. ತುಳಸಿ ಹಬ್ಬದಂದು ತುಳಸಿ ಪೂಜೆ ಮಾಡುವಾಗ ತುಳಸಿ ಗಿಡದಲ್ಲಿ ನೆಲ್ಲಿ ಟೊಂಗೆಯನ್ನು ಸಿಕ್ಕಿಸಿ ಪೂಜೆ ಮಾಡುವುದಕ್ಕೆ ಒಂದು ಸ್ವಾರಸ್ಯಕರವಾದ ಕಥೆಯಿದೆ. ಶ್ರೀಮನ್ನಾರಾಯಣ ಕಾರ್ತಿಕ ಶುಕ್ಲಪಕ್ಷ ದ್ವಾದಶಿಯ ದಿನ ತುಳಸಿಯನ್ನು ವರಿಸಿದ್ದನೆಂದು ಪ್ರತೀತಿ. ಶ್ರೀ ತುಳಸಿ ತ್ರೇತಾಯುಗದಲ್ಲಿ ಮಾನವ ರೂಪದಲ್ಲಿ ಅವತರಿಸಿದ್ದಳು. ತ್ರೇತಾಯುಗದಲ್ಲಿ ವೃಂದಾ ಎಂಬ ನಾಮಧೇಯದಿಂದ ಹುಟ್ಟಿದ್ದಳು. ಈಕೆಯ ಪತಿಯ ಹೆಸರು “ಜಲಂಧರ”. ಆತ ಮಹಾಶಿವಭಕ್ತನಾಗಿದ್ದ ಈತ ತಪಸ್ಸಿನಿಂದ ವರ ಪಡೆದು ಅಜೇಯನಾಗಿದ್ದ. ಈತನ ತೇಜಸ್ಸು ಮತ್ತು ಶಕ್ತಿ ಅಧಿಕವಾಗಲು ಈತನ ಪತ್ನಿ ವೃಂದೆಯ ಪಾತಿವ್ರತವೂ ಕಾರಣವಾಗಿತ್ತು. ಈತನು ಅಮರನಾಗ ಬೇಕೆಂಬ ಮಹಾದಾಸೆ ಯಿಂದ ಭಗವಂತನನ್ನು ಕುರಿತು ಉಗ್ರವಾದ ತಪಸ್ಸನ್ನು ಮಾಡಿದನು. ತಪಸ್ಸಿನ ಫಲವಾಗಿ ಭಗವಂತ ಪ್ರತ್ಯಕ್ಷನಾದಾಗ ಅಮರತ್ವವನ್ನು ದಯಪಾಲಿಸುವಂತೆ ಕೇಳಿದನು. ಜಲಂಧರನ ಪತ್ನಿಯ ಪಾತಿವ್ರತ್ಯ ಎಲ್ಲಿಯವರೆಗೂ ಪರಿಶುದ್ಧ ವಾಗಿರುತ್ತದೋ ಅಲ್ಲಿಯವರೆಗೂ ಸಾವು ನಿನ್ನ ಬಳಿ ಬರುವುದಿಲ್ಲ ಎಂಬ ವರ ನೀಡಿದನು. ವೃಂದ ಮಹಾ ಪತಿವ್ರತೆಯಾದ್ದರಿಂದ ಜಲಂಧರ ಕೊಬ್ಬಿದನು. ಅವಳ ಪಾತಿವ್ರತ್ಯ ಎಷ್ಟು ತೀಕ್ಷ್ಣವಾಗಿತ್ತೆಂದರೆ ಸಾಮಾನ್ಯರು ಅವಳ ಹತ್ತಿರ ಬಂದರೆ ಸುಟ್ಟು ಬೂದಿಯಾಗುತ್ತಿದ್ದರು. ಆ ಕಾರಣದಿಂದ ಜಲಂಧರ ಸಾವು ತನ್ನ ಹತ್ತಿರ ಬರುವುದಿಲ್ಲವೆಂದು ಬಲವಾಗಿ ನಂಬಿದ್ದನು. ಹೀಗೆ ಕೊಬ್ಬಿದ ಜಲಂಧರ ದೇವಭಕ್ತರಿಗೆ, ತಪಸ್ವಿಗಳಿಗೆ, ಸಾಮಾನ್ಯರಿಗೆ ತೊಂದರೆ ಕೊಡಲಾರಂಭಿಸಿದನು. ಭೂಲೋಕದಲ್ಲಿ ಯಜ್ಞ ಯಾಗಾದಿಗಳಿಗೆ ತಡೆಯೊಡ್ಡಿದನು. ಇದರಿಂದ ನೊಂದ ಋಷಿಗಳು ದೇವಾನು ದೇವತೆಗಳು ಭೂಲೋಕದ ಜನ ನಾರಾಯಣನ ಮೊರೆ ಹೊಕ್ಕರು. ವೃಂದಳ ಪಾತಿವ್ರತ್ಯ ಭಂಗಗೊಳಿಸಲು ಸಾಮಾನ್ಯರಿಗೆ ಸಾಧ್ಯವಿಲ್ಲ! ಜನರ ಮೊರೆ ಆಲಿಸಿದ ಶ್ರೀಹರಿ. ಭೋಲೋಕದಲ್ಲಿ ದುಷ್ಟನ ಸಂಹಾರವಾಗಿ ಧರ್ಮ ಸಂಸ್ಥಾಪನೆ ಯಾಗಬೇಕು ಎಂಬ ಉದ್ದೇಶದಿಂದ ಮಾನವರೂಪದಲ್ಲಿ ಬಂದು ವೃಂದೆಯ ಪಾತಿವ್ರತ್ಯ ಭಂಗಪಡಿಸಿದನು. ಇದರಿಂದ ಜಲಂಧರ ಸಾವನ್ನಪ್ಪಿದನು. ಲೋಕಕ್ಕೆ ನೆಮ್ಮದಿಯಾಯಿತು. ಆದರೆ ವೃಂದ ಚಿತೆ ನಿರ್ಮಿಸಿಕೊಂಡು ಮಂಗಳರೂಪಿಣಿ ಪಾರ್ವತಿಯನ್ನು ಸ್ಮರಿಸುತ್ತಾ ತನ್ನನ್ನು ಅಗ್ನಿಗೆ ಸಮರ್ಪಿಸಿ ಕೊಂಡಾಗ ಪಾರ್ವತಿ ಆ ಅಗ್ನಿ ಕುಂಡವನ್ನು ತನ್ನ ಮಂತ್ರ ಶಕ್ತಿಯಿಂದ ತುಳಸಿ, ನೆಲ್ಲಿ ಮತ್ತು ಜಾಜಿ ಗಿಡಗಳಿಂದ ನಂದವನ ವನ್ನಾಗಿ ಮಾಡುತ್ತಾಳೆ. ಅಂದಿನಿಂದ ತುಳಸಿ ನಿವಾಸ ಬೃಂದಾವನವಾಯಿತು. ಹಾಗಾಗಿ ತುಳಸಿ ಹಬ್ಬದ ದಿನ ನೆಲ್ಲಿಕಾಯಿ ಟೊಂಗೆ ಮತ್ತು ಜಾಜಿ ಹೂವುಗಳಿಂದ ಪೂಜೆ ಮಾಡುತ್ತಾರೆ. ಶ್ರೀಹರಿಗೆ ತುಳಸಿ ಪರಮಪ್ರಿಯ. ಆದ್ದರಿಂದ ತುಳಸಿಯನ್ನು ಪೂಜಿಸಿದರೆ ಆ ಪೂಜೆಯು ಶ್ರೀಹರಿಗೆ ಸೇರುತ್ತದೆ. ಪವಿತ್ರತೆಯ ಸಂಕೇತವಾಗಿ ತುಳಸಿ ಪೂಜೆಗೊಳ್ಳುತ್ತದೆ. ತುಳಸಿ ಪೂಜೆಯನ್ನು ಮಾಡುವಾಗ ಕೆಳಗಿನ ಶ್ಲೋಕವನ್ನು ಹೇಳಿಕೊಳ್ಳಬೇಕು.

“ನಮ: ತುಳಸಿ ನಮೋ ವಿಷ್ಣು ಪ್ರಿಯೆ ಶುಭೇ!

ನಮೋ ಮೋಕ್ಷಪ್ರದೇ ದೇವಿ

ನಮ: ಸಂಪತ್ ಪ್ರದಾಯಿನಿ”

‘‘ನಾರಾಯಣಯ ವಿದ್ಮಹೇ

ವಾಸುದೇವಾಯ ಧೀಮಹಿ

ತನ್ನೋ ವಿಷ್ಣು; ಪ್ರಚೋದಯಾತ್” ಎಂದು...

ಈಶ್ವರನ ಕೃಪೆಗಾಗಿ

“ಮಹೇಶ್ವರಾಯ ವಿದ್ಮಹೇ

ರುದ್ರದೇವಾಯ ಧೀಮಹಿ

ತನ್ನೋ ಮೃತ್ಯುಂಜಯ ಪ್ರಚೋದಯಾತ್” ಎಂದು ಜಪಿಸಬೇಕು.

- ಡಾ. ಪ್ರಕಾಶ್ ಕೆ. ನಾಡಿಗ್, ಶಿವಮೊಗ್ಗ