ವೀರಾಜಪೇಟೆ, ನ. 27: ಅಪ್ರಾಪ್ತೆಯನ್ನು ಪುಸಲಾಯಿಸಿ ಅಪಹರಿಸಿ ಅತ್ಯಾಚಾರ ಎಸಗಿದ ಆರೋಪದ ಮೇರೆ ಇಲ್ಲಿನ ನಗರ ಪೊಲೀಸರು ಹೆಗ್ಗಳ ಬಳಿಯ ರಾಮನಗರದ ವೆಂಕಟೇಶ್ (30) ಎಂಬಾತನನ್ನು ಬಂಧಿಸಿ ವೀರಾಜಪೇಟೆ ಎರಡನೇ ಅಧಿಕ ಸೆಷನ್ಸ್ ಮತ್ತು ಜಿಲ್ಲಾ ನ್ಯಾಯಾಲಯದ ಮಡಿಕೇರಿಯ ಪ್ರಭಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಮೇರೆ ಆತನನ್ನು 15 ದಿನಗಳ ತನಕ ನ್ಯಾಯಾಂಗ ಬಂಧನದಲ್ಲಿಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.ಆರೋಪಿ ವೆಂಕಟೇಶ್ ರಾಮನಗರದ ನಿವಾಸಿಯಾಗಿದ್ದು, ಪಕ್ಕದ ಮನೆಗೆ ಬಂದಿದ್ದ 17 ವರ್ಷದ ಅಪ್ರಾಪ್ತೆಯೊಂದಿಗೆ ಪರಿಚಯವಾಗಿ ಅನ್ಯೋನ್ಯತೆ ಹೊಂದಿದ್ದ. ತಾ. 21 ರಂದು ಬೆಳಿಗ್ಗೆ 6.30 ಗಂಟೆಗೆ ಆಕೆಯನ್ನು ಅಪಹರಿಸಿ ಕೆ.ಆರ್. ನಗರಕ್ಕೆ ಸಂಬಂಧಿಕರ ಮನೆಗೆ ಕರೆದೊಯ್ದು ಎರಡು ದಿನಗಳು ಅಲ್ಲಿಯೇ ತಂಗಿ ಅತ್ಯಾಚಾರವೆಸಗಿದ ನೆಂದು ಯುವತಿಯ ಪೋಷಕರು ಇಲ್ಲಿನ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಪೊಲೀಸರು ಐ.ಪಿ.ಸಿ. 376,363, ಪೋಕ್ಸೋ ಕಾಯಿದೆ 4 ಮತ್ತು 6ರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ ಅವರು ಪ್ರಕರಣದ ತನಿಖಾಧಿಕಾರಿ ಯಾಗಿದ್ದಾರೆ.