ಕೂಡಿಗೆ, ನ. 25: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರಿಗೆ ವಸೂಲಾತಿ ಮಾಸಾಚರಣೆ ಮತ್ತು ಅಭಿಯಾನ ಕಾರ್ಯಕ್ರಮ ಗ್ರಾಮ ಪಂಚಾಯಿತಿ ಆವರಣದಲ್ಲಿ ಪ್ರಾರಂಭವಾಯಿತು.
ಸರಕಾರದ ಆದೇಶದಂತೆ ಡಿಸೆಂಬರ್ ತಿಂಗಳ ಕಂದಾಯ ಮಾಸಾಚರಣೆ ಮತ್ತು ಕಂದಾಯ ಅಭಿಯಾನದಡಿಯಲ್ಲಿ ಕಂದಾಯವನ್ನು ಗ್ರಾಮ ಪಂಚಾಯಿತಿಗೆ ಕಟ್ಟುವ ಮೂಲಕ ಗ್ರಾಮದ ಅಭಿವೃದ್ಧಿ ಸಹಕಾರವಾಗಬೇಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ತಿಳಿಸಿದರು.
ಸರ್ಕಾರದ ಆದೇಶದಂತೆ ಕೈಗಾರಿಕಾ ಉದ್ದಿಮೆಗಳಿಗೆ, ಕಟ್ಟಡಗಳಿಗೆ ಕೈಗಾರಿಕೆ ಉದ್ದಿಮೆದಾರರು ಆಸ್ತಿ ಮತ್ತು ಕಟ್ಟಡ ತೆರಿಗೆಯನ್ನು ನಿಯಮಾನುಸಾರವಾಗಿ ಸಂದಾಯ ಮಾಡಬೇಕು. 2020-21ನೇ ಸಾಲಿನ ತೆರಿಗೆ ಪರಿಷ್ಕರಣೆ ಮಾಡಲಾಗಿದ್ದು, ಇದರ ಬಗ್ಗೆ ಯಾವುದೇ ಗೊಂದಲವಿದ್ದರೆ ಗ್ರಾಮ ಪಂಚಾಯಿತಿ ಗಮನಕ್ಕೆ ತರುವಂತೆ ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಯೋಜನೆಯ ಕಾಮಗಾರಿಯನ್ನು ಕೈಗೊಳ್ಳಲು ಕ್ರಿಯಾ ಯೋಜನೆ ಸಿದ್ಧವಾಗುತ್ತಿದ್ದು, ಗ್ರಾಮಸ್ಥರು ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು ಇಂಗುಗುಂಡಿ ಸೇರಿದಂತೆ ಇತರ ಕೆಲಸಗಳನ್ನು ಕೈಗೊಳ್ಳಲು ಮುಂದಾಗಬೇಕೆಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ತಿಳಿಸಿದ್ದಾರೆ.