ಮಡಿಕೇರಿ, ನ.25: ಕೃಷಿ ಯಾಂತ್ರೀಕರಣ ಉಪ ಅಭಿಯಾನ ಯೋಜನೆಯಡಿ ಪ್ರೊಮೋಷನ್ ಆಫ್ ಫಾರ್ಮ್ ಮೆಕಾನೈಸೇಷನ್ ಇನ್ ಸೆಲೆಕ್ಟೆಡ್ ವಿಲೇಜ್ ಘಟಕದಡಿ ಆಯ್ದ ಗ್ರಾಮಗಳಲ್ಲಿ ಫಾರ್ಮ್ ಮೆಷಿನರಿ ಬ್ಯಾಂಕ್‍ಗಳನ್ನು ಸ್ಥಾಪನೆ ಮಾಡುವ ಸಂಬಂಧ ಅರ್ಜಿ ಆಹ್ವಾನಿಸಲಾಗಿದೆ.
ಕೇಂದ್ರ ಪುರಸ್ಕøತ ಕೃಷಿ ಯಾಂತ್ರೀಕರಣ ಉಪ ಅಭಿಯಾನ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಯಡಿ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಸಹಾಯಧನದಲ್ಲಿ ನೀಡಲು ಕಡಿಮೆ ಮಟ್ಟದ ಯಾಂತ್ರೀಕರಣಗೊಂಡಿರುವ ಆಯ್ದ ಗ್ರಾಮಗಳಲ್ಲಿ ಕೃಷಿ ಯಂತ್ರೋಪಕರಣಗಳ ಮತ್ತು ಕೃಷಿ ಸಂಸ್ಕರಣಾ ಘಟಕಗಳ ಬ್ಯಾಂಕ್‍ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.
ಈ ಘಟಕದಡಿ ಪ್ರತಿ ಕೇಂದ್ರಕ್ಕೆ ರೂ.10 ಲಕ್ಷಗಳ ಮೌಲ್ಯದ ಉಪಕರಣಗಳಿಗೆ ಶೇ.80 ರಂತೆ ಗರಿಷ್ಠ ರೂ.8 ಲಕ್ಷ ಸಹಾಯಧನ ನೀಡಬಹುದಾಗಿದೆ. ಕೃಷಿ ಯಂತ್ರೋಪಕರಣಗಳ ಮತ್ತು ಕೃಷಿ ಸಂಸ್ಕರಣಾ ಘಟಕಗಳ ಉಪಕರಣಗಳ ಬ್ಯಾಂಕ್‍ಗಳ ನೋಂದಾಯಿತ ರೈತ ಸಹಕಾರಿ ಸೊಸೈಟಿಗಳು, ರೈತ ಉತ್ಪಾದಕ ಸಂಸ್ಥೆಗಳು, ಪಂಚಾಯತ್ ಮುಖಾಂತರ ಆಯ್ದ ಗ್ರಾಮಗಳಲ್ಲಿ ಸ್ಥಾಪಿಸಿ, ಸದಸ್ಯ ರೈತರ ತಾಕುಗಳಲ್ಲಿ ಸೂಕ್ತವಾದ ಕೃಷಿ ಚಟುವಟಿಕೆಗಳನ್ನು ಯಾಂತ್ರೀಕರಣಗೊಳಿಸುವುದು.
ಅರ್ಜಿ ಸಲ್ಲಿಸುವ ಸಂಸ್ಥೆಗಳು ಕಡಿಮೆ ಯಾಂತ್ರೀಕೃತ ಶಕ್ತಿ ಲಭ್ಯತೆ ಇರುವಂತಹ ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆದ್ದರಿಂದ ಆಸಕ್ತಿ ಉಳ್ಳ ಜಿಲ್ಲೆಯ ಸೋಮವಾರಪೇಟೆ ಮತ್ತು ವೀರಾಜಪೇಟೆ ತಾಲೂಕಿನ ಸಂಸ್ಥೆಗಳು ತಮ್ಮ ವ್ಯಾಪ್ತಿಗೆ ಬರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಡಿಸೆಂಬರ್, 10 ರೊಳಗೆ ಅರ್ಜಿ ಸಲ್ಲಿಸುವಂತೆ ಜಂಟಿ ಕೃಷಿ ನಿರ್ದೇಶಕರಾದ ಶಬಾನ ಎಂ.ಶೇಕ್ ಅವರು ತಿಳಿಸಿದ್ದಾರೆ.