ಕೂಡಿಗೆ, ನ. 24: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಬ್ರಿಟಿಷರ ಕಾಲದ ಗೋಸದನ ಕೇಂದ್ರಕ್ಕೆ ಜಿಲ್ಲಾ ಪಶುಪಾಲನೆ ಇಲಾಖೆಯ ಉಪ ನಿರ್ದೇಶಕ ಡಾ.ಸುರೇಶ್ ಭಟ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು.
ಕಳೆದ ಒಂದು ವರ್ಷದ ಹಿಂದೆ ಹುದುಗೂರು ಗ್ರಾಮದ ಗೋಸದನ ಜಾಗದ ಸರ್ವೆಕಾರ್ಯವನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ನಡೆಸಲಾಗಿತು. ಅಲ್ಲದೆ ಈ ವ್ಯಾಪ್ತಿಯ ನಾಲ್ಕು ಗ್ರಾಮಗಳ ರೈತರ ಒತ್ತಾಯದಂತೆ ಮತ್ತು ಹೈನುಗಾರಿಕೆಯನ್ನು ಹೆಚ್ಚಿಸುವ ಹಿತದೃಷ್ಟಿಯಿಂದ ಗೋಸದನಕ್ಕೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಈ ಕೇಂದ್ರವನ್ನು ಪುನರ್ ಪ್ರಾರಂಭಿಸುವ ದೃಷ್ಟಿಯಿಂದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕೇಂದ್ರಕ್ಕೆ ಭೇಟಿ ನೀಡಿ ಈ ಕೇಂದ್ರದಲ್ಲಿ ಗೋ ಸದನ ಆರಂಭಿಸಿರುವ ಯೋಜನೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಕಳೆದ ನಾಲ್ಕು ವರ್ಷಗಳಿಂದ ಸರ್ವೆ ನಂಬರ್ 2/1 ಯ 72 ಸೆಂಟ್ ಜಾಗದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯವರು ಗಿಡಗಳನ್ನು ಬೆಳೆಸುತ್ತಿದರು. ಅಲ್ಲದೆ ಈ ಜಾಗವು ಅರಣ್ಯ ಇಲಾಖೆಯ ಆರ್ಟಿಸಿ ಖಾತೆಯಾಗಿದ್ದರಿಂದ ಜಂಟಿಯಾಗಿ ಸರ್ವೆ ಕಾರ್ಯ ನಡೆದಿದೆ.
ಗೋಸದನ ಆರಂಭಿಸಲು ಸೂಕ್ತವಾದ ಜಾಗ ಮತ್ತು ಉತ್ತಮವಾದ ಗೋ ಸಾಕಣೆಯ ಕಟ್ಟಡ ಇರುವುದರಿಂದ, ಈ ಭಾಗದ ರೈತರ ಒತ್ತಾಯದಂತೆ ಪಶುಪಾಲನೆ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಗ್ರಾಮಸ್ಥರು ಸಾಮಾಜಿಕ ಅರಣ್ಯ ಇಲಾಖೆಯವರು ಗೋಸದನ ಬಲಭಾಗದ ಒಂದು ಎಕರೆ ಪ್ರದೇಶದಲ್ಲಿ ಗಿಡಗಳನ್ನು ಬೆಳಸಿ ರೈತರಿಗೆ ವಿತರಣೆ ಮಾಡಲಿ, ಗೋಸದನ ಪಕ್ಕದಲ್ಲಿರುವ ಪಶು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ಪಶು ಪರಿವೀಕ್ಷಕರನ್ನು ತಕ್ಷಣವೇ ನೇಮಕ ಮಾಡುವಂತೆ ಜಿಲ್ಲಾ ಪಶುಪಾಲನೆ ಇಲಾಖೆಯ ಅಧಿಕಾರಿಗಳಲ್ಲಿ ಮನವಿ ಮಾಡಿದರು. ಹುದುಗೂರು ಜನಜಾಗೃತಿ ರೈತ ಸಮಿತಿಯ ಅಧ್ಯಕ್ಷ ಟಿ.ಎಂ. ಚಿಣ್ಣಪ್ಪ, ಕೂಡಿಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪ್ರೇಮಲೀಲಾ, ನೀರು ಬಳಕೆದಾರರ ಸಂಘದ ಅಧ್ಯಕ್ಷ ಐ.ಎಸ್. ಗಣೇಶ್, ಕೆ.ಜಿ. ಶಿವಪ್ಪ, ಟಿ.ವಿ. ಪ್ರಭಾಕರ, ಸುರೇಶ್, ರಾಜಣ್ಣ, ಕೃಷ್ಣ ಸೇರಿದಂತೆ ನಾಲ್ಕು ಗ್ರಾಮಗಳ ರೈತರು ಹಾಜರಿದ್ದರು.