ಪಾಲಿಬೆಟ್ಟ, ನ. 24 : ಅಭಿವೃದ್ಧಿ ಕಾಣದೆ ಸಂಪೂರ್ಣ ಹಾಳಾಗಿದ್ದ ಸಿದ್ದಾಪುರ - ಪಾಲಿಬೆಟ್ಟ ರಸ್ತೆಯನ್ನು ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸಲು ಕಾಮಗಾರಿ ಪ್ರಾರಂಭವಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ತಿಳಿಸಿದ್ದಾರೆ.
ಮಳೆ ಸಂದರ್ಭದಲ್ಲಿ ರಸ್ತೆಗಳು ಹಾಳಾಗಿರುವ ಬಗ್ಗೆ ಶಾಸಕರ ಮೂಲಕ ಸರ್ಕಾರದ ಗಮನ ಸೆಳೆಯಲಾಗಿದ್ದು ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿಗಳು ವಿಶೇಷ ಕಾಳಜಿ ವಹಿಸಿ ಸಹಕಾರ ನೀಡುತ್ತಿದ್ದಾರೆ. ಮುಖ್ಯ ರಸ್ತೆಗಳು ಹಾಗೂ ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಶಾಸಕರು ವಿವಿಧ ಯೋಜನೆಗಳನ್ನು ಬಳಸಿ ಅಭಿವೃದ್ಧಿ ಪಡಿಸಲು ಮುಂದಾಗಿದ್ದು 8ತಿಂಗಳ ಹಿಂದೆಯೇ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದ್ದರು. ಕೋವಿಡ್ ಕಾರಣದಿಂದ ಅಭಿವೃದ್ಧಿ ಕಾರ್ಯಕ್ಕೆ ತಡೆಯಾಗಿತ್ತು. ಇದೀಗ ಮತ್ತೆ ಕಾಮಗಾರಿ ಪ್ರಾರಂಭವಾಗಿದ್ದು ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲು ರಸ್ತೆ ಬದಿಯ ಜಾಗ ಗಳನ್ನು ನೀಡಿ ಸಹಕಾರ ನೀಡಬೇಕೆಂದರು.
ತಾಲೂಕು ಪಂಚಾಯ್ತಿ ಸದಸ್ಯ ಅಜಿತ್ ಕರುಂಬಯ್ಯ ಮಾತನಾಡಿ ಮಳೆ ಹಾನಿ ಯೋಜನೆಯಡಿಯಲ್ಲಿ ಅಂದಾಜು 4.13 ಕೋಟಿ ರೂ ವೆಚ್ಚದಲ್ಲಿ ಮೂರು ಸೇತುವೆ ಹಾಗೂ ರಸ್ತೆ ಅಗಲೀಕರಣಗೊಳಿಸಿ ಡಾಮರೀಕರಣ ಮಾಡಿ ಅಭಿವೃದ್ಧಿಗೊಳಿಸಲಾಗುತ್ತಿದ್ದು ರಸ್ತೆ ಬದಿಯಲ್ಲಿರುವ ತೋಟದ ಮಾಲೀಕರು ಚರಂಡಿ ನಿರ್ಮಾಣಕ್ಕೆ ಜಾಗ ಬಿಟ್ಟು ಅಭಿವೃದ್ಧಿಗೆ ಕೈಜೋಡಿಸಬೇಕೆಂದರು.