ಕೋವಿಡ್ ನಿಯಂತ್ರಿಸಲು ಪ್ರಧಾನಿ ಮನವಿ
ನವದೆಹಲಿ, ನ. 24: ಕೊರೊನಾ ವೈರಸ್ ಚೇತರಿಕೆ ಮತ್ತು ಮರಣ ಪ್ರಮಾಣ ದರದಲ್ಲಿ ಇತರ ರಾಷ್ಟ್ರಗಳಿಗಿಂತ ಭಾರತದ ಪರಿಸ್ಥಿತಿ ಉತ್ತಮವಾಗಿದೆ. ಆದರೆ, ಪಾಸಿಟಿವ್ ಪ್ರಮಾಣವನ್ನು ಶೇ. 5ಕ್ಕಿಂತಲೂ ಕಡಿಮೆಗೆ ಇಳಿಸಬೇಕಾಗಿದೆ, ಆರ್‍ಟಿಪಿಸಿಆರ್ ಟೆಸ್ಟ್‍ಗಳನ್ನು ಹೆಚ್ಚಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪರಿಸ್ಥಿತಿ ಹದಗೆಡುತ್ತಿರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ಮಾತನಾಡಿದ್ದು, ಪ್ರಸ್ತುತ ಪರಿಸ್ಥಿತಿ ಹಾಗೂ ಲಸಿಕೆ ವಿತರಣೆಗೆ ಪೂರ್ವ ಸಿದ್ಧತೆ ಬಗ್ಗೆ ಚರ್ಚೆ ನಡೆಸಲಾಗಿದೆ. ಇದೀಗ ಸ್ಪಷ್ಟ ಚಿತ್ರಣ ದೊರೆತಿದೆ. ಜಂಟಿ ಪ್ರಯತ್ನದ ಫಲವಾಗಿ ಚೇತರಿಕೆ ಹಾಗೂ ಮರಣ ಪ್ರಮಾಣದಲ್ಲಿ ಅನ್ಯ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಪರಿಸ್ಥಿತಿ ಉತ್ತಮವಾಗಿದೆ ಎಂದು ಮುಖ್ಯಮಂತ್ರಿಗಳೊಂದಿಗೆ ನಡೆದ ವರ್ಚುಯಲ್ ಸಭೆಯಲ್ಲಿ ಪ್ರಧಾನಿ ನುಡಿದರು. ದೇಶವು ಸಾಕಷ್ಟು ಮಾಹಿತಿಯನ್ನು ಹೊಂದಿದ್ದು, ಕೋವಿಡ್ ನಿರ್ವಹಣೆಯಲ್ಲಿ ವ್ಯಾಪಕ ಅನುಭವವನ್ನು ಹೊಂದಿದೆ. ಕಾರ್ಯತಂತ್ರವನ್ನು ರೂಪಿಸುವಾಗ ಪಾಸಿಟಿವಿಟಿ ದರವನ್ನು ಶೇ. 5 ಮತ್ತು ಮರಣ ಪ್ರಮಾಣವನ್ನು ಶೇ. 1ಕ್ಕಿಂತಲೂ ಕಡಿಮೆ ಮಾಡಬೇಕಾಗಿದೆ. ಕೋಲ್ಡ್ ಸ್ಟೋರೇಜ್ ಸೌಲಭ್ಯಗಳನ್ನು ನಿರ್ಮಿಸಲು ರಾಜ್ಯಗಳು ಕೆಲಸ ಪ್ರಾರಂಭಿಸಬೇಕು ಎಂದು ಅವರು ಹೇಳಿದರು.
ಪರಮಶಿವಯ್ಯ ವೀರಶೈವ ನಿಗಮದ ಅಧ್ಯಕ್ಷರು
ಬೆಂಗಳೂರು, ನ. 24: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ಬಿ.ಎಸ್. ಪರಮಶಿವಯ್ಯ ಅವರನ್ನು ನೇಮಕ ಮಾಡಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆದೇಶ ಹೊರಡಿಸಿದ್ದಾರೆ. ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ ಅಧ್ಯಕ್ಷರಾಗಿರುವ ಬೆಂಗಳೂರಿನ ವಿಜಯನಗರದ ನಿವಾಸಿ ಬಿ.ಎಸ್. ಪರಮಶಿವಯ್ಯ ನೇಮಕಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಂಕಿತ ಹಾಕಿದ್ದಾರೆ. ಬಿ.ಎಸ್. ಪರಮಶಿವಯ್ಯ ಹಲವಾರು ವರ್ಷಗಳಿಂದ ವೀರಶೈವ ಲಿಂಗಾಯತ ಅಭಿವೃದ್ಧಿಗಾಗಿ ಸಾಮಾಜಿಕ ಕಾರ್ಯ, ಜೊತೆಗೆ ರಾಜಕೀಯವಾಗಿ ಗುರುತಿಸಿಕೊಂಡಿದ್ದು, ಈ ಹಿಂದೆ ವಿಧಾನ ಪರಿಷತ್ ಸದಸ್ಯರ ನೇಮಕದ ಪಟ್ಟಿಯಲ್ಲಿ ಅವರ ಹೆಸರಿತ್ತು. ಆದರೆ ಕೊನೆ ಘಳಿಗೆಯಲ್ಲಿ ಪರಮಶಿವಯ್ಯ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ಕೈತಪ್ಪಿತ್ತು. ಕ್ಯಾಬಿನೆಟ್ ಸ್ಥಾನಮಾನದೊಂದಿಗೆ ಅಧ್ಯಕ್ಷ ಸ್ಥಾನ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಇzಕ್ಕೂ ಮುನ್ನ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಅವರಿಗೆ ದೂರವಾಣಿ ಕರೆ ಮಾಡಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವಂತೆ ಸೂಚಿಸಿದ್ದರು. ಆದರೆ ವೀರಣ್ಣ ಚರಂತಿಮಠ ಅಧ್ಯಕ್ಷ ಸ್ಥಾನವನ್ನು ತಿರಸ್ಕರಿಸಿದ್ದರು.
ಫೆ.26 ರಿಂದ ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ
ಬೆಂಗಳೂರು, ನ. 24: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಾಂಕ ನಿಗದಿ ಆಗಿದೆ. 2021ರ ಫೆ. 26, 27 ಮತ್ತು 28 ರಂದು ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಗಾರ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತಂತೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೊರೊನಾ ಸೋಂಕು ಇಳಿಮುಖವಾಗುತ್ತಿದ್ದು ಮಾರ್ಗಸೂಚಿಗಳನ್ನು ಸಡಿಲ ಗೊಳಿಸಿ ಅಕ್ಷರ ಜಾತ್ರೆಗೆ ಅನುವು ಮಾಡಿಕೊಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ ಎಂದು ಮನು ಬಳಗಾರ್ ಹೇಳಿದ್ದಾರೆ.
ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ
ನವದೆಹಲಿ, ನ. 24: ಸತತ ಏರಿಕೆಯಿಂದ ಕಂಗಾಲಾಗಿದ್ದ ಚಿನ್ನದ ಗ್ರಾಹಕರ ಮೊಗದಲ್ಲಿ ಇದೀಗ ಮಂದಹಾಸ ಮೂಡುವಂತಾಗಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಮೇಲೆ ರೂ. 900 ಇಳಿಕೆಯಾಗಿದ್ದು 10 ಗ್ರಾಂ ಚಿನ್ನದ ಬೆಲೆ ರೂ. 48,250 ತಲುಪಿದೆ. ಇನ್ನು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ರೂ. 980 ಇಳಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆಯಲ್ಲಿ ರೂ. 52,630 ತಲುಪಿದೆ ಎಂದು ಹೆಚ್‍ಡಿಎಫ್‍ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ ತಪನ್ ಪಟೇಲ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಮೇಲೆ ರೂ. 900 ಇಳಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ ರೂ. 46,200 ತಲುಪಿದೆ. ಇನ್ನು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ರೂ. 980 ಇಳಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆಯಲ್ಲಿ ರೂ. 50,400 ತಲುಪಿದೆ. ಇನ್ನು ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಂಡಿದೆ. ರೂ. 1,588 ಇಳಿಕೆಯಾಗಿದ್ದು 1 ಕೆ.ಜಿ. ಬೆಳ್ಳಿಯ ಬೆಲೆ ರೂ. 59,301 ತಲುಪಿದೆ.
121 ಮಾವೋವಾದಿಗಳು ಈಗ ಪೊಲೀಸರು
ರಾಯಪುರ, ನ. 24: ಸದಾ ಪೆÇಲೀಸರ ವಿರುದ್ಧ ಹೋರಾಡುತ್ತಿದ್ದ 121 ಮಾವೋವಾದಿಗಳು ಈಗ ಸ್ವತಃ ಪೆÇಲೀಸರಾಗಿ ನೇಮಕಗೊಂಡಿದ್ದು, ಶೀಘ್ರದಲ್ಲೇ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಭಾಗವಹಿಸಲಿದ್ದಾರೆ. ದಕ್ಷಿಣ ಛತ್ತೀಸ್‍ಗಢದ ಬಸ್ತರ್ ಪೆÇಲೀಸರು ಈ ಮಹತ್ವದ ಸಾಧನೆ ಮಾಡಿದ್ದು, ನಕ್ಸಲ್ ಪೀಡಿತ ವಿವಿಧ ಜಿಲ್ಲೆಗಳಲ್ಲಿ ಶರಣಾದ 121 ಮಾವೋವಾದಿ ಕಾರ್ಯಕರ್ತರು ಜಗದಾಲ್‍ಪುರ ಪೆÇಲೀಸ್ ತರಬೇತಿ ಶಾಲೆಯಲ್ಲಿ ಕಾನ್‍ಸ್ಟೇಬಲ್‍ಗಳಾಗಿ ಹೊರನಡೆದರು. ಇಂದು ಪಾಸಿಂಗ್- ಹೌಟ್ ಪೆರೇಡ್‍ನಲ್ಲಿ ಭಾಗವಹಿಸಿದ್ದ 227 ಪೆÇಲೀಸ್ ಪೇದೆಗಳಲ್ಲಿ 121 ಮಾಜಿ ಮಾವೋವಾದಿಗಳು ಸೇರಿದ್ದಾರೆ. 11 ತಿಂಗಳ ಕಠಿಣ ತರಬೇತಿ ಕೋರ್ಸ್‍ಗೆ ಸೇರುವ ಮೊದಲು ಅನಕ್ಷರಸ್ಥರಾಗಿದ್ದ ಮಾಜಿ ಮಾವೋವಾದಿಗಳಲ್ಲಿ 117 ಮಂದಿ ಓದುವ ಮತ್ತು ಬರೆಯುವ ಸಾಮಥ್ರ್ಯವನ್ನು ಬೆಳೆಸಿಕೊಂಡಿರುವುದು ಮತ್ತೊಂದು ಸಾಧನೆಯಾಗಿದೆ. ಬಸ್ತಾರ್ ಪೆÇಲೀಸರು ಬುಡಕಟ್ಟು ಗ್ರಾಮಸ್ಥರ ಬೆಂಬಲ ಪಡೆಯುವ ಮೂಲಕ ನೂರಾರು ನಕ್ಸಲರನ್ನು ಮುಖ್ಯವಾಹಿನಿಗೆ ಕರೆತಂದು ಅವರಲ್ಲಿ ವಿಶ್ವಾಸ ಮೂಡಿಸಿದ್ದಾರೆ.
43 ಆ್ಯಪ್‍ಗಳನ್ನು ಬ್ಯಾನ್ ಮಾಡಿದ ಸರ್ಕಾರ
ನವದೆಹಲಿ, ನ. 24: ರಾಷ್ಟ್ರೀಯ ಭದ್ರತೆ, ಗ್ರಾಹಕ ಸುರಕ್ಷತೆ ಮತ್ತು ಹಿತಾಸಕ್ತಿ ರಕ್ಷಣೆಯ ಸಲುವಾಗಿ ಕೇಂದ್ರ ಸರ್ಕಾರ ಮತ್ತೆ 43 ಆ್ಯಪ್‍ಗಳನ್ನು ಬ್ಯಾನ್ ಮಾಡಿದೆ. ಲಡಾಕ್ ಮತ್ತು ಗಲ್ವಾನ್ ಕಣಿವೆಯ ಗಡಿ ಸಂಘರ್ಷದ ಬಳಿಕ ಉಭಯ ರಾಷ್ಟ್ರಗಳ ನಡುವಣ ಸಂಬಂಧ ಹಳಸಿದೆ. ಚೀನಾಗೆ ಬುದ್ಧಿ ಕಲಿಸುವ ಸಲುವಾಗಿ ಕೇಂದ್ರ ಸರ್ಕಾರ ಚೀನಾ ಮೂಲದ ಸರಕುಗಳನ್ನು ಮಾತ್ರವಲ್ಲದೆ, ಆ್ಯಪ್, ಡಿಜಿಟಲ್ ಸೇವೆಗಳನ್ನು ಕೂಡ ಹಂತಹಂತವಾಗಿ ನಿಷೇಧಿಸುತ್ತಿದೆ. ಕೇಂದ್ರ ಸರ್ಕಾರ ಇಲ್ಲಿಯವರೆಗೂ ಚೀನಾದ ಒಟ್ಟು 228 ಆಪ್‍ಗಳನ್ನು ಬ್ಯಾನ್ ಮಾಡಿದ್ದು ಇದೀಗ ಮತ್ತೆ 43 ಆ್ಯಪ್‍ನ್ನು ನಿಷೇಧಿಸಿದೆ.
ಬಾಂಗ್ಲಾ ದಾಳಿಕೋರನ ಬಂಧನ
ಸಿಂಗಾಪುರ, ನ. 24: ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ದಾಳಿಗೆ ಸಂಚು ರೂಪಿಸಿ, ಕಾಶ್ಮೀರದಲ್ಲಿ ಹೋರಾಡಲು ಮುಂದಾಗಿದ್ದ ಆ ದೇಶದ ಪ್ರಜೆಯೊಬ್ಬನನ್ನು ಭದ್ರತಾ ಪಡೆಗಳು ಮಂಗಳವಾರ ಬಂಧಿಸಲಾಗಿದೆ. ಯುರೋಪಿನಲ್ಲಿ ಇತ್ತೀಚಿನ ಭಯೋತ್ಪಾದಕ ದಾಳಿಯ ನಂತರ ನಗರ-ರಾಜ್ಯದಲ್ಲಿ ಹೆಚ್ಚಿದ ಭದ್ರತಾ ಕ್ರಮಗಳ ಭಾಗವಾಗಿ 37 ಜನರ ಅನುಮಾನಾಸ್ಪದ ಚಟುವಟಿಕೆಗಳನ್ನು ತನಿಖೆ ನಡೆಸಿದ ನಂತರ ಇದು ತಿಳಿದು ಬಂದಿದೆ. ಸಿಂಗಾಪುರದಲ್ಲಿ 37 ಜನರ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಭಯೋತ್ಪಾದನಾ ನಿಗ್ರಹ ದಳದಿಂದ ತನಿಖೆ ನಡೆಸಲಾಗಿದ್ದು, ಅವರಲ್ಲಿ ಬಹುತೇಕ ಮಂದಿ ಇತ್ತೀಚಿಗೆ ಫ್ರಾನ್ಸ್‍ನಲ್ಲಿ ನಡೆದ ಉಗ್ರ ದಾಳಿಯ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಹಿಂಸಾಚಾರಕ್ಕೆ ಪ್ರಚೋದನೆ ಅಥವಾ ಸಮುದಾಯದಲ್ಲಿ ಅಶಾಂತಿಯನ್ನು ಉಂಟು ಮಾಡುವ ಸಂದೇಶಗಳನ್ನು ಫೆÇೀಸ್ಟ್ ಮಾಡಿದ್ದರು ಎಂದು ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
6.870 ಕೆ.ಜಿ. ಮಾದಕ ವಸ್ತು ವಶ
ಬೆಂಗಳೂರು, ನ. 24: ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಬೆಂಗಳೂರು ವಲಯದ ಎನ್‍ಸಿಬಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿ, 6.870 ಕೆ.ಜಿ. ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಮಾದಕ ವಸ್ತು ಸಾಗಿಸುತ್ತಿದ್ದ ಶುಕ್ಲಾ ಮತ್ತು ಮರಿಯಾ ಹಾಗೂ ನೈಜೀರಿಯಾ ಮೂಲದ ಒನೊವೋ, ಓಕ್ವರ್ ಬಂಧಿತ ಆರೋಪಿಗಳು. ಬೇಬಿ ಬ್ಯಾಗಿನಲ್ಲಿ ಇಟ್ಟು ಸಾಗಿಸುತ್ತಿದ್ದ 6.870 ಕೆ.ಜಿ. ಸ್ಯೂಡೋಫೆಡ್ರೈನ್ ಮಾದಕ ವಸ್ತುವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಎಫೆಡ್ರೈನ್ ಮತ್ತು ಸ್ಯೂಡೋಫೆಡ್ರಿನ್ ನಂತಹ ವಸ್ತುಗಳು ರಾಸಾಯನಿಕಗಳಾಗಿವೆ, ಡಿಟರ್ಜೆಂಟ್, ಸುಗಂಧ ದ್ರವ್ಯಗಳು, ಬಣ್ಣಗಳು ಮತ್ತಿತರ ವಸ್ತುಗಳ ತಯಾರಿಕೆಗೆ ಅದನ್ನು ಬಳಕೆ ಮಾಡಲಾಗುತ್ತದೆ. ಆದರೆ ಅದನ್ನು ಮಾದಕ ವಸ್ತುವಾದ ಆಂಫೆಟಮೈನ್ ಟೈಪ್ ಸ್ಟಿಮ್ಯುಲಂಟ್ (ಎಟಿಎಸ್) ತಯಾರಿಗೂ ಬಳಕೆ ಮಾಡಬಹುದು ಎಂದು ಅಧಿಕಾರಿಗಳು ವಿವರಿಸಿದ್ದಾರೆ.