ಮಡಿಕೇರಿ, ನ. 23: ತಾ. 30 ರಂದು ಜರುಗಲಿರುವ ಪುತ್ತರಿ ಹಬ್ಬದ ಪ್ರಯುಕ್ತ ಮಡಿಕೇರಿ ಕೊಡವ ಸಮಾಜದ ವತಿಯಿಂದ ವರ್ಷಂಪ್ರತಿ ಯಂತೆ ಹಬ್ಬದ ಮುನ್ನ ನಡೆಸುವ 3 ದಿನಗಳ ‘ಪುತ್ತರಿ ಈಡ್' ಕಾರ್ಯ ಕ್ರಮವನ್ನು ಈ ಬಾರಿ ಕೋವಿಡ್-19 ಕಾರಣದಿಂದಾಗಿ ಒಂದೇ ದಿನ ಅಂದರೆ ತಾ. 28ರಂದು ಸಂಜೆ 6.30 ಗಂಟೆಗೆ ಮಡಿಕೇರಿ ಕೊಡವ ಸಮಾಜ ಕೋಲ್ ಮಂದ್‍ನಲ್ಲಿ ನಡೆಸಲು ನಿಶ್ಚಯಿಸಲಾಗಿದೆ. ತಾ. 30 ರಂದು ಪುತ್ತರಿ ಹಬ್ಬದಂದು ಸಂಪ್ರದಾಯ ದಂತೆ ಕೆಳಗಿನ ಕೊಡವ ಸಮಾಜದಲ್ಲಿ ಸಂಜೆ 7.45 ಗಂಟೆಗೆ ನೆರೆ ಕಟ್ಟುವುದು, 8.45 ಗಂಟೆಗೆ ಓಂಕಾರೇಶ್ವರ ದೇವಾಲಯದ ಗದ್ದೆಯಲ್ಲಿ ಕದಿರು ಕುಯ್ಯುವುದು, ನಂತರ ಸಮಾಜದ ಆವರಣದಲ್ಲಿ ಕದಿರು ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಕೊಡವ ಸಮಾಜ ಪ್ರಕಟಣೆ ತಿಳಿಸಿದೆ.